ಪರಿಸರ ಸಂರಕ್ಷಿಸುವ ಕಾರ್ಯ ಬದುಕಿನ ಭಾಗವಾಗಲಿ: ಮೂಲಿಮನೆ ಈರಣ್ಣ

| Published : Jun 30 2025, 12:34 AM IST

ಸಾರಾಂಶ

ಪರಿಸರ ಮನುಷ್ಯರ ಬದುಕಿನ ಭಾಗವಾಗಿದೆ. ಮಾನವನ ಅಭಿವೃದ್ಧಿ ಕೆಲಸಗಳು ಪರಿಸರವನ್ನು ನಾಶಪಡಿಸುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿ ಪಡಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.

ಕನ್ನಡಪ್ರಭ ವಾರ್ತೆ ಸಂಡೂರು

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೀಚ್ ಸಂಸ್ಥೆ, ಅರಣ್ಯ ಇಲಾಖೆ, ಎಸ್‌ಕೆಎಂಇ ಸಂಸ್ಥೆ ಹಾಗೂ ಶ್ರೀಉಜ್ಜಿನಿ ಜಗದ್ಗುರು ಸಿದ್ದೇಶ್ವರ ಪ್ರೌಢಶಾಲೆಯ ಸಹಯೋಗದಲ್ಲಿ ಯಶವಂತನಗರ ಗ್ರಾಮದ ಬಳಿಯ ರಾಘಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳಿಂದ ತಯಾರಿಸಲಾದ ಸುಮಾರು ೨೦೦೦ ಬೀಜದ ಉಂಡೆಗಳನ್ನು (ಸೀಡ್ ಬಾಲ್) ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪರಿಸರವಾದಿ ಮೂಲೆಮನಿ ಈರಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪರಿಸರ ಮನುಷ್ಯರ ಬದುಕಿನ ಭಾಗವಾಗಿದೆ. ಮಾನವನ ಅಭಿವೃದ್ಧಿ ಕೆಲಸಗಳು ಪರಿಸರವನ್ನು ನಾಶಪಡಿಸುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿ ಪಡಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗಳಿಗೂ ಒದಗಿಸಿಕೊಡಲು ನಾವೆಲ್ಲರೂ ಶ್ರಮಿಸಬೇಕಿದೆ. ಪರಿಸರ ಸಂರಕ್ಷಣೆಯ ಕಾರ್ಯ ನಮ್ಮ ಬದುಕಿನ ಭಾಗವಾಗಬೇಕಿದೆ ಎಂದರು.

ಎಸ್‌ಕೆಎಂಇ ಸಂಸ್ಥೆಯ ಎಚ್.ಆರ್. ವ್ಯವಸ್ಥಾಪಕಿ ಮಾಳವಿಕಾ ರೋಣ, ಬೀಜದುಂಡೆ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಬೀಜದುಂಡೆ ತಯಾರಿಸಿ, ಅವುಗಳನ್ನು ನೆಟ್ಟು, ಗಿಡಮರಗಳನ್ನು ಬೆಳೆಸಿ ಉತ್ತಮ ಪರಿಸರ ನಿರ್ಮಿಸುವ ಕಾರ್ಯ ಶ್ಲಾಘನೀಯ ಎಂದರು.

ಅರಣ್ಯ ಇಲಾಖೆಯ ಫಾರೆಸ್ಟ್ ವಾಚರ್ ವಿಜಯಲಕ್ಷ್ಮೀ ಮಾತನಾಡಿ, ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸುವ ಮೂಲಕ ಭೂಮಿಯನ್ನು ಹಸಿರಾಗಿಸಬೇಕಿದೆ ಎಂದು ತಿಳಿಸಿದರು.

ರೀಚ್ ಸಂಸ್ಥೆಯ ತಾಲೂಕು ಸಂಯೋಜಕ ಎರಿಸ್ವಾಮಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ಪ್ರದೇಶ ನಾಶಪಡಿಸಲಾಗುತ್ತಿದೆ. ಇದರಿಂದ ಮುಂದೊಂದು ದಿನ ಉಸಿರಾಡಲು ಕೃತಕ ಸಿಲೆಂಡರ್‌ಗಳ ಮೊರೆ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಶ್ರೀ ಉಜ್ಜಿನಿ ಜಗದ್ಗುರು ಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್. ಕೊಟ್ರೇಶ್, ಶಿಕ್ಷಕರು, ವಿದ್ಯಾರ್ಥಿಗಳು, ಉಪ ವಲಯ ಅರಣ್ಯಾಧಿಕಾರಿ ಇಮಾಂ ಸಾಹೇಬ್, ಯಶವಂತನಗರದ ಪರಿಸರ ಪ್ರೇಮಿ ಬಳಗದ ಸದಸ್ಯರಾದ ಚಂದ್ರಪ್ಪ, ವೆಂಕಟೇಶ್, ನಾಗರಾಜ್, ನಿಂಗರಾಜ್, ಅರಣ್ಯ ಇಲಾಖೆಯ ಸಿಬ್ಬಂದಿ ಮಲ್ಲೇಶಪ್ಪ, ಭೀಮಣ್ಣ ಮುಂತಾದವರಿದ್ದರು.