ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ಜಿಲ್ಲೆಯಲ್ಲಿ ಜೂ. 30ರಂದು ಜರಗುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಟಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ 17 ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ ನಡೆಯುತ್ತಿದ್ದು, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದ್ದು, ಸಮಯ ಪರಿಪಾಲನೆ ಅತೀ ಮುಖ್ಯ. ಕೊಠಡಿಗಳಲ್ಲಿ ಗೋಡೆ ಗಡಿಯಾರಗಳನ್ನು ಅಳವಡಿಸಬೇಕು. ಯಾವುದೇ ಅಕ್ರಮ, ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ಟಿಇಟಿ ಪರೀಕ್ಷೆ ಜೂ. 30ರಂದು ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಪ್ರಥಮ ಅಧಿವೇಶನ ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ ದ್ವಿತೀಯ ಅಧಿವೇಶನ ಮಧ್ಯಾಹ್ನ 2ರಿಂದ 4.30ರ ವರೆಗೆ ಜರುಗಲಿದೆ. ಅಧಿವೇಶನ -1ರ ಪರೀಕ್ಷೆ 11 ಕೇಂದ್ರಗಳಲ್ಲಿ ಹಾಗೂ ಅಧಿವೇಶನ-2ರ ಪರೀಕ್ಷೆ 17 ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.ಪ್ರಥಮ ಅಧಿವೇಶನದಲ್ಲಿ 2716 ಅಭ್ಯರ್ಥಿಗಳು ಹಾಗೂ ದ್ವಿತೀಯ ಅಧಿವೇಶನದಲ್ಲಿ 4612 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಕೇಂದ್ರಗಳಿಗೆ 9 ಮಾರ್ಗಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಮಾರ್ಗಾಧಿಕಾರಿಗಳಿಗೆ, ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಮತ್ತು ಸ್ಥಾನಿಕ ಜಾಗೃತದಳದ ಅಧಿಕಾರಿಗಳ ನೇಮಕಾತಿ ಮಾಡಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಸೂಕ್ತ ಪೊಲೀಸ್ ಬಂದೋಬಸ್ತ್, ಮಾರ್ಗಾಧಿಕಾರಿಗಳ ವಾಹನಕ್ಕೆ ಎಸ್ಕಾರ್ಟ್ ವ್ಯವಸ್ಥೆ, ತುರ್ತು ಆರೋಗ್ಯ ತಪಾಸಣೆಗೆ ಸೂಕ್ತ ವ್ಯವಸ್ಥೆ ಕುರಿತು ಚರ್ಚಿಸಲಾಯಿತು. ಈ ವೇಳೆ ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.