ರೈತರಿಗೆ ರೇಷ್ಮೆ ಕೃಷಿಯಲ್ಲಿ ಆಸಕ್ತಿ ಮೂಡಿಸಿ

| Published : Jul 25 2024, 01:22 AM IST

ಸಾರಾಂಶ

ರೈತರ ಜಮೀನುಗಳಲ್ಲಿರುವ ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿರುವುದರಿಂದ ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ ಬಗ್ಗೆ ರೈತರು ಆಸಕ್ತಿ ತೋರಿಸಲು ಅಧಿಕಾರಿಗಳು ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ತೋಟಗಾರಿಕೆಯಲ್ಲಿ ಹೊಸ ತಳಿಗಳ ಪರಿಚಯಿಸಿ ತೋಟಗಾರಿಕೆ ಬಗ್ಗೆ ಜಾಗೃತಿ ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿರುವ ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿರುವುದರಿಂದ ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ ಬಗ್ಗೆ ರೈತರು ಆಸಕ್ತಿ ತೋರಿಸಲು ಅಧಿಕಾರಿಗಳು ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ತೋಟಗಾರಿಕೆಯಲ್ಲಿ ಹೊಸ ತಳಿಗಳ ಪರಿಚಯಿಸಿ ತೋಟಗಾರಿಕೆ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಾಲೂಕು ಆಡಳಿತಾಧಿಕಾರಿ ಮತ್ತು ನೋಡಲ್ ಅಧಿಕಾರಿ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ ಪಟೇಲ ಹೇಳಿದರು.

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಗೋವಿನ ಸಭೆಯಲ್ಲಿ ಇಲಾಖೆ ಪ್ರಗತಿ ವರದಿ ಹೇಳುವಾಗ ಮಧ್ಯೆಪ್ರವೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕುಂಚಾವರಂ, ಸುಲೇಪೇಟ, ಐನಾಪೂರ, ಕೋಡ್ಲಿ, ನಿಡಗುಂದಾ, ಚಂದನಕೇರಾ, ಐನೋಳಿ, ದೇಗಲಮಡಿ ಗ್ರಾಮಗಳಲ್ಲಿ ಉತ್ತಮ ಫಲವತ್ತಾದ ಮಣ್ಣಿನಿಂದ ಕೂಡಿದೆ. ಅಡಿಕೆ, ತೆಂಗು, ದ್ರಾಕ್ಷಿ, ರೇಷ್ಮೆ ಬೆಳೆಯಬಹುದು. ಆದರೆ ಇಲ್ಲಿ ತೋಟಗಾರಿಕೆ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಆಗುತ್ತಿಲ್ಲ. ಒಮ್ಮೆ ಮುಂಡಗೋಡ ತಾಲೂಕಿಗೆ ಹೋಗಿ ಕಲಿತುಕೊಂಡು ಬನ್ನಿರಿ ಎಂದು ಸೂಚಿಸಿದರು.

ತಾಪಂ ಇಒ ಶಂಕರ ರಾಠೋಡ ಮಾತನಾಡಿ, ನಮ್ಮ ತಾಲೂಕಿನಲ್ಲಿ ಮುಲ್ಲಾಮಾರಿ ನದಿ ವರ್ಷವಿಡೀ ಹರಿಯುತ್ತದೆ. ತೋಟಗಾರಿಕೆಗೆ ಸಾಕಷ್ಟು ನೀರಿನ ಅನುಕೂಲಕತೆ ಇದೆ. ಆದರೆ, ನಮ್ಮ ತಾಲೂಕಿನ ನದಿ ನೀರು ಸೇಡಮ ತಾಲೂಕಿನ ಸಿಮೆಂಟ್‌ ಕಂಪನಿಗಳಿಗೆ ಬಳಕೆ ಆಗುತ್ತಿದೆ ರೈತರಿಗೆ ತೋಟಗಾರಿಕೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ತಾಲೂಕಿನ ಕುಂಚಾವರಂ ಗಡಿಪ್ರದೇಶದಲ್ಲಿ ಕುರಿಗಳ ಸಾವು ವಿಚಿತ್ರ ಕಾಯಿಲೆಯಿಂದಾಗಿ ಹೆಚ್ಚುತ್ತಿವೆ. ಕುರಿಗಳ ಸಾವಿನಿಂದ ಕುರಿಗಾಹಿಗಳು ಬಹಳಷ್ಟು ಸಂಕಷ್ಟವನ್ನು ಎದುರಿಸಬೇಕಾಗಿದೆ ಪಶು ಇಲಾಖೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ತಾಪಂ ಅಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ೨೦೨೪-೨೫ನೇ ಸಾಲಿನ ಚಿಂಚೋಳಿ ತಾಲೂಕ ಪಂಚಾಯತಿಗೆ ಇಲಾಖಾವಾರು ನಿಗದಿಪಡಿಸಿದ ಒಟ್ಟು ಅನುದಾನವನ್ನು ತಾಪಂ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಬಿಆರಸಿ ಅಧಿಕಾರಿ ರಾಚಪ್ಪ ಭದ್ರಶೆಟ್ಟಿ, ಸಿಡಿಪಿಓ ಸವಿತಾ, ಜೆ.ಇ. ಯುವರಾಜ ರಾಠೋಡ, ಎಇಇ ಪ್ರವೀಣಕುಮಾರ, ತೋಟಗಾರಿಕೆ ಅಧಿಕಾರಿ ರಾಜಕುಮಾರ ಗೋವಿನ, ಮೀನುಗಾರಿಕೆ ಇಲಾಖೆ ಅಧಿಕಾರಿ ಪದ್ಮಾವತಿ ಇಲಾಖೆ ಪ್ರಗತಿ ವರದಿಯನ್ನು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಬೆಡೆಕಪಳ್ಳಿ ಇನ್ನಿತರಿದ್ದರು.