ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರಿ ಶಾಲೆಗಳ ಅವ್ಯವಸ್ಥೆಯಿಂದಲೇ ಮಕ್ಕಳು ದಾಖಲಾಗುತ್ತಿಲ್ಲ. ಈಗ ಉತ್ತಮ ಕಟ್ಟಡದ ಜೊತೆಗೆ ಸರ್ಕಾರ ಹಲವಾರು ಯೋಜನೆಗಳನ್ನೂ ಜಾರಿಗೊಳಿಸಿದ್ದು, ಸದ್ಬಳಸಿಕೊಳ್ಳಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಆರ್.ಅಮರನಾಥ್ ಹೇಳಿದರು.ಹೋಬಳಿಯ ದೊಡ್ಡಸಾಗರಹಳ್ಳಿಯಲ್ಲಿ ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ಕಂಪೆನಿ ೧ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣ ಉತ್ತಮ ಬೆಳವಣಿಗೆ. ಆದರೆ, ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸಿಕೊಂಡು ಶಾಲೆಯಲ್ಲಿ ಮತ್ತಷ್ಟು ಪರಿಣಾಮಕಾರಿ ಕಲಿಕೆಗೆ ಶ್ರಮಿಸಬೇಕು ಎಂದು ಹೇಳಿದರು.
ಗ್ರಾಪಂ ಸದಸ್ಯೆ ಪದ್ಮಾವತಿ ಮಾತನಾಡಿ, ಜನಪ್ರತಿನಿಧಿಗಳು ನಮ್ಮಿಂದ ಏನೂ ಆಗುವುದಿಲ್ಲವೆಂದು ಕೈಕಟ್ಟಿಕೊಂಡು ಕುಳಿತರೆ ಯಾವ ಕೆಲಸವೂ ಆಗುವುದಿಲ್ಲ. ಶಿಕ್ಷಣಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕು. ಪ್ರತಿಯೊಬ್ಬರಿಗೂ ಬದ್ಧತೆಯಿಂದಾಗಿ ಇಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು.ಗ್ರಾಪಂ ಸದಸ್ಯ ಮುದುಗುರ್ಕಿ ಮಾರಪ್ಪ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ಮಕ್ಕಳು ಸದುಪಯೋಗಪಡಿಕೊಳ್ಳುವುದರ ಜತೆಗೆ ಸಂಸ್ಕಾರ ಭರಿತ ಶಿಕ್ಷಣ ಪಡೆದುಕೊಳ್ಳಬೇಕು. ಪೋಷಕರೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಪ್ರೋತ್ಸಾಹ ಮಾಡಬೇಕು. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳ ಕಡೆಗೆ ಬರಬೇಕು ಎಂದರು.
ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ಸಂಸ್ಥೆಯ ಅಧ್ಯಕ್ಷ ದುಪಾರೆ ಮಾತನಾಡಿ, ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಹಯೋಗದಲ್ಲಿ ೧೦ ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದರು.ನೂತನ ಶಾಲೆಯನ್ನು ವಿದ್ಯುತ್ ದೀಪ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಗ್ರಾಪಂ ಅಧ್ಯಕ್ಷೆ ಆಶಾ, ವ್ಯವಸ್ಥಾಪಕ ನಿರ್ದೇಶಕ ಟ್ಯಾಂಕಿಂಗ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ, ಗ್ರಾಪಂ ಸದಸ್ಯರಾದ ಮುನಿರತ್ನಮ್ಮ, ಜೋಸೆಫ್, ಮುಖ್ಯ ಶಿಕ್ಷಕ ಗಂಗಾಧರ್, ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯ ಜನಪ್ರತಿನಿಧಿಗಳು, ಟ್ಯಾಂಕಿಂಗ್ ಸಂಸ್ಥೆ ಪದಾಧಿಕಾರಿಗಳು ಹಾಜರಿದ್ದರು.