ಸಾರ್ವಜನಿಕರ ಆರೋಗ್ಯದ ಅನುಕೂಲಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳ ಜಾರಿಗೊಳಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.

ಬ್ಯಾಡಗಿ: ಸಾರ್ವಜನಿಕರ ಆರೋಗ್ಯದ ಅನುಕೂಲಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳ ಜಾರಿಗೊಳಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ 2 ಡಯಾಲಿಸಿಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು, ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಿದೆ, ವಯಸ್ಸಾದಂತೆ ಬರುವ ದೀರ್ಘಕಾಲದ ವಯೋ ಸಹಜ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡ, ಕೀಲುನೋವು, ಕಣ್ಣು, ಕಿವಿ ಸಮಸ್ಯೆ ಸೇರಿದಂತೆ ದೇಹದ ಅಂಗಾಂಗಗಳ ಆರೋಗ್ಯ ಕಾಪಾಡಿಕೊಳ್ಳುವತ್ತ ಪೌಷ್ಟಿಕ ಆಹಾರ ಪದಾರ್ಥಗಳ ಸೇವನೆ ಮಾಡುವತ್ತ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ವೈದ್ಯರಿಗೂ ಅನುಕೂಲತೆ ಕಲ್ಪಿಸಬೇಕಾಗಿದೆ: ಪ್ರಸ್ತುತ ಆರೋಗ್ಯ ಕೇಂದ್ರದಲ್ಲಿ ವಾರ್ಷಿಕವಾಗಿ 1.50 ಲಕ್ಷಕ್ಕೂ ಅಧಿಕ ಅಂದರೆ ಸರಾಸರಿ 600ಕ್ಕೂ ಹೆಚ್ಚು ಹೊರ ರೋಗಿಗಳು (ಓಪಿಡಿ) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಸದರಿ ಆಸ್ಪತ್ರೆ ಕಿಷ್ಕಿಂಧೆಯಂತಾಗಿದ್ದು ವೈದ್ಯರಿಗೆ ಅನುಕೂಲತೆಗಳು ಇಲ್ಲದಂತಾಗಿದೆ ಎಂದರು.ಜನರಿಗೆ ಆರೋಗ್ಯ ತಲುಪಿಸಬೇಕಾಗಿದೆ: ಸಾರ್ವಜನಿಕರಿಗೆ ಕಡ್ಡಾಯವಾಗಿ ಆರೋಗ್ಯಸೇವೆ ತಲುಪಿಸಬೇಕಾಗಿದೆ. ಇದಕ್ಕಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರಬದ್ಧವಾಗಿದ್ದು, ಹೀಗಾಗಿ ಈಗಾಗಲೇ 10 ಎಕರೆ ನಿವೇಶನ ಮೀಸಲಿಟ್ಟಿದ್ದು, ಶೀಘ್ರದಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದರು. ಈ ವೇಳೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಡಾ.ಎ.ಎಂ. ಸೌದಾಗರ, ಲಕ್ಷ್ಮೀ ಜಿಂಗಾಡೆ, ಮಲ್ಲೆಶಪ್ಪ ದೇಸಾಯಿ, ಕರಬಸಪ್ಪ ಹಾದರಗೇರಿ, ಬೀರಣ್ಣ ಬಣಕಾರ, ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ತಾಲೂಕಾ ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ, ಡಾ. ನಾಗರಾಜ. ಡಾ.ಚೇತನ್. ಡಾ.ಸುರೇಶ ಗುಂಡಪಲ್ಲಿ, ಡಾ.ವೀರೇಶ ಹಿರಿಯ ಆರೋಗ್ಯ ನಿರೀಕ್ಷಕ ಪ್ರಶಾಂತ ನವಲೆ ಸೇರಿದಂತೆ ಹಲವರು ಭಾಗವಹಿಸಿದ್ದರು.