ಕೊಪ್ಪಳ: ಸರ್ಕಾರ ಮತ್ತು ಸಂಘ ಸಂಸ್ಥೆಗಳ ಮೂಲಕ ಅಂಗವಿಕಲ ಮಕ್ಕಳಿಗೆ ಇರುವ ಪುನಃಶ್ಚೇತನ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು.
ನಗರದ ಅರುಣಚೇತನ ವಿಶೇಷ ಮಕ್ಕಳ ಶಾಲೆ, ಹಿಂದೂಸೇವಾ ಪ್ರತಿಷ್ಠಾನ ಹಾಗೂ ಮಹಾತ್ಮಗಾಂಧಿ ಅನಾಥ ಸೇವಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಇತ್ತೀಚಿಗೆ ಜರುಗಿದ ಮೊದಲನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಂಗವಿಕಲರ ಹಕ್ಕುಗಳ ಕಾಯ್ದೆ ಪ್ರಕಾರ 21 ಬಗೆಯ ವಿಕಲಚೇತನರು ಇದ್ದಾರೆ.ಅರುಣಚೇತನ ವಿಶೇಷ ಮಕ್ಕಳ ಶಾಲೆಯಿಂದ ನಗರ ಭಾಗದ ಅಂಗವಿಕಲ ಮಕ್ಕಳಿಗೆ ಅಗತ್ಯ ಪುನಃಶ್ಚೇತನ ಸೌಲಭ್ಯ ದೊರಕುತ್ತಿವೆ. ಜಿಲ್ಲಾಡಳಿತ ಶೀಘ್ರದಲ್ಲೇ ಅಂಗವಿಕಲ ಮಕ್ಕಳ ಪುನಃಶ್ಚೇತನಕ್ಕಾಗಿ ಆರಂಭಿಕ ಮಧ್ಯಸ್ಥಿಕೆ ಕೇಂದ್ರ ಪ್ರಾರಂಭಿಸಲಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಲಾ ಸಮಿತಿ ಕಾರ್ಯದರ್ಶಿ ರೇಣುಕಾ ಪ್ರಾಸ್ತಾವಿಕವಾಗಿ ಮಾತನಾಡಿ, 7ನೇ ಶಾಲೆಯಾಗಿ ಕೊಪ್ಪಳ ನಗರದಲ್ಲಿ 2025ರಲ್ಲಿ ಪ್ರಾರಂಭವಾಗಿ ಸಮಾಜಸೇವಾ ಮನಸ್ಕರ ಸಹಕಾರದಿಂದ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿ ಕಾರ್ಯ ನಿರ್ವಹಿಸುತ್ತಿದೆ. ಶಾಲೆಯಲ್ಲಿ ಪ್ರಸ್ತುತ 30 ವಿಶೇಷಚೇತನ ಮಕ್ಕಳು ಕಲಿಯುತ್ತಿದ್ದಾರೆ. ಫಿಸಿಯೋಥೆರಪಿ, ವಿಶೇಷಶಿಕ್ಷಣ, ಸಾಧನ ಸಲಕರಣೆ ಜತೆಗೆ ಶಾಲಾವಾಹನ ಸೌಲಭ್ಯವಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಪಾಲನೆ, ಪೋಷಣೆ ಕುರಿತಂತೆ ಆರೈಕೆದಾರರ ಸಭೆ ಮಾಡಿ ಅವಲೋಕಿಸಲಾಗುತ್ತಿದೆ. ನುರಿತ ಸಿಬ್ಬಂದಿ ವರ್ಗ ಮಕ್ಕಳ ಪುನಃಶ್ಚೇತನಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ದಾನಿಗಳು ಮಕ್ಕಳ ಪುನಃಶ್ಚೇತನಕ್ಕಾಗಿ ಪ್ರಾಯೋಜಕತ್ವ ತೆಗೆದುಕೊಂಡರೆ ಶಾಲೆಯ ಸೇವೆ ವಿಸ್ತರಿಸಲು ಸಹಕಾರಿಯಾಗಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮಗಾಂಧಿ ಅನಾಥ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಜೈನ್‌ಮಾತನಾಡಿ, ಈ ಭಾಗದಲ್ಲಿ ಅಂಗವಿಕಲ ಮಕ್ಕಳಿಗೆ ವಿಶೇಷ ಶಾಲೆಯ ಅಗತ್ಯವಿತ್ತು. ಈ ಶಾಲೆ ಪ್ರಾರಂಭವಾಗಿ ಅತ್ಯುತ್ತಮ ಸೇವೆ ನೀಡುತ್ತಿದೆ. ಶಾಲೆಯ ಸೇವೆ ಹೆಚ್ಚಿನ ವಿಶೇಷ ಚೇತನ ಮಕ್ಕಳಿಗೆ ತಲುಪಿಸಲು ದಾನಿಗಳು ಕೈಜೋಡಿಸಲು ಮನವಿ ಮಾಡಿದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಹಿರಿಯ ವೈದ್ಯ ಡಾ.ಕೆ.ಜಿ.ಕುಲಕರ್ಣಿ, ಕೊಪ್ಪಳ ಇನ್ನರ್‌ವೀಲ್ ಕ್ಲಬ್ ಸ್ಥಾಪಕ ಸದಸ್ಯೆ ಡಾ.ರಾಧಾ ಕುಲಕರ್ಣಿ, ಅರುಣ ಚೇತನ ಶಾಲಾ ಸಮಿತಿ ಅಧ್ಯಕ್ಷ ಅನಂತ ಇನಾಂದಾರ್, ಅನಿಲ್ ನಾಲವಾಡ್, ಆರೈಕೆದಾರರು ಸೇರಿದಂತೆ ಮೊದಲಾದವರು ಕಾಯಕ್ರಮದಲ್ಲಿ ಉಪಸ್ಥಿತರಿದ್ದರು.