ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆಯಾಗಲಿ: ಜಿಪಂ ಸಿಇಒ

| Published : Apr 06 2025, 01:47 AM IST

ಸಾರಾಂಶ

ಅರಣ್ಯ ಇಲಾಖೆಯವರು ಉದ್ಯೋಗ ಖಾತ್ರಿ ಯೋಜನೆಯನ್ನು ಹೆಚ್ಚು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಬೇಕು

ಮುಂಡಗೋಡ: ಅರಣ್ಯ ಇಲಾಖೆಯವರು ಉದ್ಯೋಗ ಖಾತ್ರಿ ಯೋಜನೆಯನ್ನು ಹೆಚ್ಚು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಈಶ್ವರ ಕಾಂದೂ ಹೇಳಿದರು.ಶನಿವಾರ ಇಲ್ಲಿಯ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಕೂಲತೆಯಿದೆ. ಆದರೆ ಅರಣ್ಯ ಇಲಾಖೆಯವರು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಪ್ರದೇಶದಲ್ಲಿ ಉತ್ತಮ ಕಾಮಗಾರಿ ಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿರುವ ೧೬ ಗ್ರಾಪಂನವರು ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಯಾಗಿ ಅನಿಷ್ಠಾನಗೊಳಿಸುವ ಮೂಲಕ ಕಾರ್ಮಿಕರಿಗೆ ಕೆಲಸ ನೀಡಿದ್ದು ಮುಂದಿನ ದಿನಗಳಲ್ಲಿಯೂ ಇದೇ ರೀತಿಯಾಗಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.

ಟಿ.ವೈ. ದಾಸನಕೊಪ್ಪ, ಸೋಮಣ್ಣ ಛಬ್ಬಿ, ಪಂಚಾಯತ್ ರಾಜ್ ಎಂಜಿನಿಯರ್ ಪ್ರದೀಪ ಭಟ್, ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಕೃಷ್ಣ ಕುಳ್ಳೂರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ರಾಜೇಶ್ವರಿ ಕದಂ ಮುಂತಾದವರಿದ್ದರು.

ಮೈನಳ್ಳಿ ಗ್ರಾಪಂ, ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗನವಾಡಿ ಮಕ್ಕಳೊಂದಿಗೆ ಕೆಲ ಸಮಯ ಕಳೆದರು. ನಂತರ ಬಾಚಣಕಿ ಗ್ರಾಪಂ ವ್ಯಾಪ್ತಿಯ ಅರಶಿಣಗೇರಿ ಆರೋಗ್ಯ ಕೇಂದ್ರ, ನ್ಯಾಸರ್ಗಿ ಜಲಾಶಯದ ಬಳಿ ನಿರ್ಮಾಣಗೊಳ್ಳುತ್ತಿರುವ ಶುದ್ಧ ಕುಡಿಯುವ ನೀರು ಸರಬರಾಜು ಘಟಕ ಕಾಮಗಾರಿಯನ್ನು ವೀಕ್ಷಿಸಿದರು.