ಹಸಿರುಪ್ರೀತಿ ಜೀವನದ ಅವಿಭಾಜ್ಯ ಅಂಗವಾಗಲಿ: ಲೋಕೇಶ್ ನಾಯಕ

| Published : Jun 06 2024, 12:30 AM IST

ಸಾರಾಂಶ

ಪರಿಸರದ ವಿನಾಶದಿಂದಲೇ ಅಪಾಯಗಳ ಸೃಷ್ಟಿಯಾಗುತ್ತದೆ ಎಂದ ಅವರು, ಜೀವನೋಪಾಯಕ್ಕಾಗಿ ಪರಿಸರದ ಸೂಕ್ಷ್ಮತೆಗಳನ್ನರಿತು ನಡೆದರೆ ಮನುಷ್ಯನ ಬದುಕು ಹಸನಾಗಬಲ್ಲದು.

ಯಲ್ಲಾಪುರ: ಪರಿಸರ ಸಂರಕ್ಷಣೆ ಪ್ರಥಮ ಆದ್ಯತೆಯಾಗಬೇಕು. ಆಧುನಿಕತೆಯ ಭರಾಟೆಯಲ್ಲಿ ಪರಿಸರ ಕುರಿತಾದ ಕಾಳಜಿ ಕಡಿಮೆಯಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲಿನ ಗೌರವ ಕಳೆಯುತ್ತಿರುವುದು ವಿಷಾದನೀಯ ಎಂದು ವಜ್ರಳ್ಳಿಯ ಉಪವಲಯಾರಣ್ಯಾಧಿಕಾರಿ ಲೋಕೇಶ್ ನಾಯಕ ತಿಳಿಸಿದರು.

ಜೂ. ೫ರಂದು ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ಸರ್ವೋದಯ ಇಕೋ ಕ್ಲಬ್‌ಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರದ ವಿನಾಶದಿಂದಲೇ ಅಪಾಯಗಳ ಸೃಷ್ಟಿಯಾಗುತ್ತದೆ ಎಂದ ಅವರು, ಜೀವನೋಪಾಯಕ್ಕಾಗಿ ಪರಿಸರದ ಸೂಕ್ಷ್ಮತೆಗಳನ್ನರಿತು ನಡೆದರೆ ಮನುಷ್ಯನ ಬದುಕು ಹಸನಾಗಬಲ್ಲದು. ಪರಿಸರದ ಪ್ರೀತಿ ಜನಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು.

ಅರಣ್ಯ ರಕ್ಷಕ ಕೆಂಚಪ್ಪ ಹಂಚಿನಾಳ ಮಾತನಾಡಿ, ಅರಣ್ಯ ರಕ್ಷಣೆಯ ಮೂಲಕ ಜಗತ್ತಿಗೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಹಸಿರಿನ ಸಮೃದ್ಧಿ ನಮ್ಮ ಜೀವನದ ವೃದ್ಧಿಯೂ ಹೌದು. ನಮ್ಮ ಪರಿಸರದಲ್ಲಿರುವ ಸಸ್ಯ ಸಂರಕ್ಷಣೆ ಹವಾಮಾನದ ಸಂರಕ್ಷಣೆಯೂ ಆಗಿದೆ. ನಿತ್ಯವೂ ಪರಿಸರ ದಿನಾಚರಣೆಯಾಗಬೇಕು. ಪರಿಸರದ ಮೇಲಿನ ಪ್ರೀತಿ ರಕ್ಷಣೆಯ ಜವಾಬ್ದಾರಿ ಹೆಚ್ಚಿಸಲು ನೆರವಾಗುತ್ತದೆ ಎಂದರು.

ಸರ್ವೋದಯ ಪ್ರೌಢಶಾಲಾ ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ ಮಾತನಾಡಿ, ಅಪರೂಪದ ವನ್ಯಸಂಪತ್ತು ನಾಶವಾಗಲು ತಾಪಮಾನ ಕಾರಣವಾಗುತ್ತಿದೆ. ಹಸಿರಿನ ವನಸಿರಿಯ ಮಹತ್ವವನ್ನು ಸಾರುವ ಕಾರ್ಯವಾಗಬೇಕು ಎಂದರು.

ಅರಣ್ಯ ರಕ್ಷಕರಾದ ಗೌಡಪ್ಪ ಸುಳ್ಳದ, ದತ್ತಾತ್ರೇಯ ತಳವಾರ ವೇದಿಕೆಯಲ್ಲಿದ್ದರು. ಮೈತ್ರಿ ಮೂಲೆಮನೆ ಸಂಗಡಿಗರ ಪರಿಸರ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್.ಟಿ. ಬೇವಿನಕಟ್ಟಿ ಸ್ವಾಗತಿಸಿದರು. ಶಿಕ್ಷಕ ಚಿದಾನಂದ ಹಳ್ಳಿ ವಂದಿಸಿದರು.