ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಅಪರೂಪದ ಮಾನವ ಜನ್ಮಕ್ಕೆ ಬಂದ ನಾವುಗಳು ಪುಣ್ಯದ ಬಳ್ಳಿಯನ್ನು ಬೆಳಸಿಕೊಳ್ಳಬೇಕು ಹಾಗೂ ಹೃದಯ ಕ್ಷೇತ್ರದಲ್ಲಿ ಜ್ಞಾನದ ಬಳ್ಳಿಯನ್ನು ಬೆಳಸಿ ಮನುಜ ಜನ್ಮದ ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ಇಂಚಲದ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು ನುಡಿದರು.ಕರಗುಪ್ಪಿ ಗ್ರಾಮದ ಶ್ರೀಸ್ವಾಮಿ ಶಂಕರಾನಂದ ಪರಮಹಂಸರ ಮಠದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಜ್ಞಾನದ ಬಳ್ಳಿ ಬೆಳೆಯಲು ಸತ್ಸಂಗದಲ್ಲಿ ಭಾಗವಹಿಸಿ ಮಹಾತ್ಮರ ದರ್ಶನ, ಸ್ಪರ್ಶನ ಹಾಗೂ ಅಮೃತವಾಣಿ ಆಲಿಸಿ ಮನಸು ಶುದ್ಧಿಕರಿಸಿಕೊಳ್ಳಬೇಕು ಎಂದರು.
ಯುವ ಧುರೀಣ ರಾಹುಲ ಜಾರಕಿಹೊಳಿ ಮಾತನಾಡಿ, ಮಠ-ಮಾನ್ಯಗಳು ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಜನರಲ್ಲಿ ಧಾರ್ಮಿಕ ಮನೋಭಾವನೆ ಬೆಳಸುವ ಕಾರ್ಯಗಳು ಮಾಡುತ್ತಿದ್ದು, ಮಠಗಳಲ್ಲಿ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕಲಿಸಬೇಕು. ಸ್ವಾಮಿ ಶಂಕರಾನಂದ ಮಠದ ಅಭಿವೃದ್ಧಿಗೆ ಸಚಿವ ಸತೀಶ ಜಾರಕಿಹೊಳಿ ಮತ್ತು ಚಿಕ್ಕೋಡಿ ಸಂಸದ ಪ್ರಿಯಾಂಕಾ ಜಾರಕಿಹೊಳಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.ಅಂಕಲಗಿ-ಕುಂದರಗಿಯ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಹುಬ್ಬಳ್ಳಿಯ ಜಡಿಯೋಗೀಂದ್ರ ಮಠದ ರಾಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಗಳು, ಹಡಗಿನಾಳ ಸುಜ್ಞಾನಾ ಕುಟೀರದ ಮಲ್ಲೇಶ್ವರ ಶರಣರು, ಕರಗುಪ್ಪಿ ಯಬರಟ್ಟಿಯ ಚಂದ್ರಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಂದ್ರಯ್ಯ ಸ್ವಾಮಿಗಳು ಹಾಗೂ ಶರಣರಿಂದ ಮತ್ತು ಶ್ರೀಕಾಂತ ಚನ್ನಮಲ್ಲಪ್ಪ ಪಾಯನ್ನವರ ಕುಟುಂಬದ ವರ್ಗದವರಿಂದ ಶೋ.ಬ್ರ. ಸದ್ಗುರು ಡಾ.ಶಿವಾನಂದ ಮಹಾಸ್ವಾಮಿಗಳವರ ತುಲಾಭಾರ ಸೇವೆ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರಾದ ಮಲಗೌಡ ಪಾಟೀಲ, ಹುಕ್ಕೇರಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಮಂಜುನಾಥ ಪಾಟೀಲ ಮತ್ತು ಕರಗುಪ್ಪಿ ಗ್ರಾಪಂ ಅಧ್ಯಕ್ಷರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಧಾನಿಗಳಿಗೆ ಸತ್ಕರಿಸಿ, ಗೌರವಿಸಲಾಯಿತು.