ಒಳ್ಳೆ ಕೆಲಸ ಕಾರ್ಯಗಳನ್ನು ಮಾಡುವುದು ರೂಢಿಸಿಕೊಳ್ಳಿರಿ

| Published : Mar 19 2024, 12:50 AM IST

ಸಾರಾಂಶ

ಐಗಳಿ: ಹಸಿದ ಹೊಟ್ಟೆಗೆ ಅನ್ನ ನೀಡುವುದು, ಬಾಯಾರಿಕೆಯಿಂದ ಬಂದವರಿಗೆ ನೀರು ಕೊಡುವುದು, ಬಿಸಿಲಿನ ತಾಪದಲ್ಲಿಂದ ಬಂದವರಿಗೆ ನೆರಳಿನಲ್ಲಿ ಕರೆಯುವುದು, ಬಿದ್ದವರನ್ನು ಎಬ್ಬಿಸುವುದು, ಇಂತಹ ಕಾರ್ಯವನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಳ್ಳಿರಿ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು. ಸ್ಥಳೀಯ ಮಹಾ ತಪಸ್ವಿ ಜಂಗಮಜ್ಯೋತಿ ಲಿಂ.ಅಪ್ಪಯ್ಯ ಸ್ವಾಮಿಗಳ ಜಾತ್ರೆಯ ನಿಮಿತ್ತ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರಿಗೆ ಉಚಿತವಾಗಿ ಗ್ರಾಮದ ಅಲ್ಪಸಂಖ್ಯಾತರ ಮುಸ್ಲಿಂ ಭಾಂಧವರು ಮಜ್ಜಿಗೆ, ಶರಬತ್ತ, ಪಾನಕ ಇತ್ಯಾದಿ ವಿತರಿಸಿದರು.

ಕನ್ನಡಪ್ರಭ ವಾರ್ತೆ ಐಗಳಿ

ಹಸಿದ ಹೊಟ್ಟೆಗೆ ಅನ್ನ ನೀಡುವುದು, ಬಾಯಾರಿಕೆಯಿಂದ ಬಂದವರಿಗೆ ನೀರು ಕೊಡುವುದು, ಬಿಸಿಲಿನ ತಾಪದಲ್ಲಿಂದ ಬಂದವರಿಗೆ ನೆರಳಿನಲ್ಲಿ ಕರೆಯುವುದು, ಬಿದ್ದವರನ್ನು ಎಬ್ಬಿಸುವುದು, ಇಂತಹ ಕಾರ್ಯವನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಳ್ಳಿರಿ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.

ಸ್ಥಳೀಯ ಮಹಾ ತಪಸ್ವಿ ಜಂಗಮಜ್ಯೋತಿ ಲಿಂ.ಅಪ್ಪಯ್ಯ ಸ್ವಾಮಿಗಳ ಜಾತ್ರೆಯ ನಿಮಿತ್ತ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರಿಗೆ ಉಚಿತವಾಗಿ ಗ್ರಾಮದ ಅಲ್ಪಸಂಖ್ಯಾತರ ಮುಸ್ಲಿಂ ಭಾಂಧವರು ಮಜ್ಜಿಗೆ, ಶರಬತ್ತ, ಪಾನಕ ಇತ್ಯಾದಿ ವಿತರಿಸಿ ಮಾತನಾಡಿದ ಅವರು, ಶ್ರೀಗಳ ಜಾತ್ರೆಗೆ ಬೇರೆ ಬೇರೆ ರಾಜ್ಯ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದಾರೆ. ಬೇಸಿಗೆ ಬಿಸಿಲಿನಲ್ಲಿ ಸುಡುವ ನೆತ್ತಿಗೆ ತಂಪು ಮಾಡುವ ಕಾರ್ಯದಲ್ಲಿ ಸಮಾಜದ ಭಾಂಧವರು ತೊಡಗಿದ್ದಾರೆ. ಅಪ್ಪಯ್ಯ ಸ್ವಾಮಿಗಳು ಪವಾಡ ಪುರುಷರು ಅನೇಕ ಪವಾಡ ಮಾಡಿ ತೋರಿಸಿದ್ದಾರೆ. ಅವರಲ್ಲಿ ಒಂದು ಶಕ್ತಿ ಇದೆ. ಶ್ರೀಗಳ ಮೇಲೆ ಭಕ್ತಿ ಪೂರ್ವಕವಾಗಿ ನೋಡಿದರೆ ನಿಮ್ಮಲ್ಲಿ ಅವರು ಸದಾ ಇರುತ್ತಾರೆ. ನೀವು ಇಟ್ಟ ಗುರಿ ಮುಟ್ಟಲು ಸಾಧ್ಯ. ನಾನು ಅಪ್ಪಯ್ಯ ಸ್ವಾಮಿಗಳ ಹಾಗೂ ಮಾಣಿಕ ಪ್ರಭು ದೇವರ ಪರಮ ಭಕ್ತನಾಗಿದ್ದಾರೆ. ಶ್ರೀಗಳ ಆಶೀರ್ವಾದ ಹಾಗೂ ಗ್ರಾಮಸ್ಥರ ಸಹಕಾರದಿಂದ ವಿಧಾನ ಸೌಧ ಮೆಟ್ಟಿಲು ಹತ್ತಲು ಸಾಧ್ಯವಾಯಿತು. ಗ್ರಾಮದಲ್ಲಿ ಶ್ರೀಗಳ ಆಶೀರ್ವಾದದಿಂದ ಭಾವೈಕ್ಯತೆಯ ಕೊಂಡಿ ಮತ್ತಷ್ಟು ಗಟ್ಟಿಯಾಯಿತು ಎಂದರು.

ಶಿವಯ್ಯ ಸ್ವಾಮೀಜಿ ಮಾತನಾಡಿ, ಅಪ್ಪಯ್ಯ ಸ್ವಾಮಿಗಳ ಜಾತ್ರೆಯಲ್ಲಿ ಮುಸ್ಲಿಂ ಭಾಂಧವರು ಹಮ್ಮಿಕೊಂಡಿದ್ದ ಕಾರ್ಯ ಶ್ಲಾಘನೀಯ ಅಪ್ಪಯ್ಯ ಸ್ವಾಮಿಗಳು ನುಡಿದಂತೆ ಆಗುತ್ತಿತ್ತು. ಅವರು ಪಾದ ಇಟ್ಟ ಸ್ಥಳದಲ್ಲಿ ಅನೇಕ ದೇವಾಲಯಗಳು ನಿರ್ಮಾಣಗೊಂಡಿವೆ. ಐಗಳಿ ಸುತ್ತ-ಮುತ್ತಲಿನ ಭಕ್ತರು ಅಪ್ಪಯ್ಯ ಶ್ರೀಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಶ್ರೀಗಳ ಜಾತ್ರೆ ಭಾವೈಕ್ಯತೆಯ ಜಾತ್ರೆ ಎಂದು ಭಾವೈಕ್ಯತೆ ಜಾತ್ರೆ ಎಂದು ಮುಸ್ಲಿಂ ಮಜ್ಜಿಗೆ ವಿತರಿಸುವುದಕ್ಕೆ ಸಾಕ್ಷಿಯಾಗಿದೆ.

ಈ ವೇಳೆ ಮುಸ್ಲಿಂ ಸಮಾಜದ ಅಧ್ಯಕ್ಷ ನೂರಅಹ್ಮದ್‌ ಡೊಂಗರಗಾಂವ, ಡಾ.ರವಿ ಮುದಗೌಡರ, ಗ್ರಾಪಂ ಸದಸ್ಯ ಬಸವರಾಜ ಬಿರಾದಾರ, ಜಗದೀಶ ತೆಲಸಂಗ, ಬಾಳ ಮುಜಾವರ, ಅಕ್ಬರ್‌ ಮುಜಾವರ(ಪಿ.ಸಿ), ನಜೀರ್‌ ಮುಜಾವರ, ಶಬ್ಬಿರ್‌ ಮುಜಾವರ, ಬದ್ರು ಮುಜಾವರ, ಜಲಾಲ ಮುಜಾವರ ಸೇರಿದಂತೆ ಅನೇಕರು ಇದ್ದರು.