ಮಾರಿಕಾಂಬಾ ದೇವಿ ಜಾತ್ರೆ ಯಶಸ್ವಿಗೊಳಿಸಿ: ಶಾಸಕ ಭೀಮಣ್ಣ ನಾಯ್ಕ

| Published : Mar 16 2024, 01:46 AM IST

ಸಾರಾಂಶ

ಜಾತ್ರೆಯ ದೊಡ್ಡ ಜವಾಬ್ದಾರಿ ಭದ್ರತೆಯಾಗಿದ್ದು, ನಗರಸಭೆ ಅದಕ್ಕೆ ಸಿದ್ಧಗೊಳ್ಳುತ್ತಿದೆ.

ಶಿರಸಿ: ರಾಜ್ಯ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯ ನಡೆಯುವ ಬಿಡ್ಕಿಬೈಲ್, ಕೋಣನಬಿಡ್ಕಿಗೆ ಶುಕ್ರವಾರ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು, ಕೆಲ ಅಗತ್ಯ ಸಲಹೆ- ಸೂಚನೆಗಳನ್ನು ನೀಡಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾರಿಕಾಂಬಾ ದೇವಿಯ ಜಾತ್ರೆಯು ಮಾ. ೧೯ರಿಂದ ಆರಂಭವಾಗುತ್ತಿದ್ದು, ಸಿದ್ಧತೆಯನ್ನು ದೇವಾಲಯದ ಆಡಳಿತ ಮಂಡಳಿ, ಪೊಲೀಸ್ ಇಲಾಖೆ, ನಗರಸಭೆ, ಕಂದಾಯ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ನಡೆಸುತ್ತಿದ್ದಾರೆ. ಬಾಬದಾರರು ಅವರ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಪೊಲೀಸ್ ಇಲಾಖೆಯು ಭದ್ರತೆಗೆ ಎಲ್ಲ ಸಿದ್ಧತೆ ಮಾಡಿ ೨೦೦ ಸಿಸಿ ಕ್ಯಾಮೆರಾ ಅಳವಡಿಸಿ ನಿಗಾ ಇಡುವ ಕೆಲಸ ಮಾಡುತ್ತಿದೆ. ನಗರಸಭೆಯು ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ಒದಗಿಸುತ್ತಿದ್ದು, ಸ್ವಚ್ಛತೆಗೆ ಬೇಕಾಗುವ ಎಲ್ಲ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆಸುತ್ತಿದೆ ಎಂದರು.ಜಾತ್ರಾ ಚಪ್ಪರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸಾರಿಗೆ ಇಲಾಖೆ ಹಿಂದಿನಿಂದಲೂ ೧೫೦ ಬಸ್ ಒದಗಿಸಿ, ಉತ್ತಮ ಸೇವೆ ನೀಡುತ್ತ ಬಂದಿದ್ದು, ಈ ವರ್ಷ ೨೦೦ಕ್ಕೂ ಹೆಚ್ಚು ಬಸ್ ಸೇವೆಯಲ್ಲಿರಲಿದೆ. ಸಿದ್ದಾಪುರ, ಕುಮಟಾ, ಯಲ್ಲಾಪುರ, ಹುಬ್ಬಳ್ಳಿ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತಿ ಬಾರಿಯ ಜಾತ್ರೆಗಿಂತ ಈ ವರ್ಷ ೨ ಪಟ್ಟು ಹೆಚ್ಚು ಮಹಿಳಾ ಭಕ್ತರು ಬರುವ ನಿರೀಕ್ಷೆ ಎಲ್ಲರಿಂದ ವ್ಯಕ್ತವಾಗಿದ್ದು, ಅದಕ್ಕೆ ಹೆಚ್ಚಿನ ವ್ಯವಸ್ಥೆಗೆ ಮುಂದಾಗಿದ್ದೇವೆ. ರಥೋತ್ಸವ ಸಂದರ್ಭದಲ್ಲಿ ಸೂಕ್ತ ಭದ್ರತೆಗೆ, ಜಾಗ್ರತೆಗೆ ಪ್ರಾಮುಖ್ಯತೆ ನೀಡಲಾಗಿದೆ. ಹೊರ ಊರುಗಳಿಂದ ಸಂಪರ್ಕಿಸುವ ರಸ್ತೆಗಳಲ್ಲಿ ವಿಶೇಷ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲ ಸಂಘಟನೆಗಳು, ಜನಪ್ರತಿನಿಧಿಗಳ ಸಹಕಾರ, ಹಿರಿಯ, ಭಕ್ತರ ಸಹಕಾರದಿಂದ ನಾಡಿನ ಜಾಗೃತ ಶಕ್ತಿಪೀಠದ ಶ್ರೀದೇವಿಯ ಜಾತ್ರೆ ಯಶಸ್ವಿಗೊಳಿಸೋಣ ಎಂದರು.

ಭದ್ರತೆಗಾಗಿ ಸಭೆ ನಡೆಸಿ ಎಲ್ಲ ರೀತಿಯಿಂದ ಭದ್ರತೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಜಾತ್ರೆಯ ದೊಡ್ಡ ಜವಾಬ್ದಾರಿ ಭದ್ರತೆಯಾಗಿದ್ದು, ನಗರಸಭೆ ಅದಕ್ಕೆ ಸಿದ್ಧಗೊಳ್ಳುತ್ತಿದೆ. ಈ ಹಿಂದೆ ಯಾವ ರೀತಿ ನಡೆಯುತ್ತಾ ಬಂದಿತ್ತೋ, ಅದೇ ರೀತಿ ಸೂಕ್ತ ಭದ್ರತೆ, ಸಹಕಾರದಿಂದ ಅದ್ಧೂರಿಯಾಗಿ ದೇವಿಯ ಆಶೀರ್ವಾದದಿಂದ ನಡೆಯುವ ವಿಶ್ವಾಸ ಇದೆ ಎಂದರು.ಈ ಸಂದರ್ಭದಲ್ಲಿ ಮಾರಿಕಾಂಬಾ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷ ಸುದೇಶ ಜೊಗಳೇಕರ್, ಸದಸ್ಯರಾದ ಸುಧೀರ ಹಂದ್ರಾಳ, ಎಸ್.ಪಿ .ಶೆಟ್ಟಿ, ಬಾಬದಾರ ಜಗದೀಶ ಗೌಡ, ಬಾಬದಾರ ಪ್ರಮುಖರು, ಡಿವೈಎಸ್‌ಪಿ ಎಂ.ಎಸ್. ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ, ಪೌರಾಯುಕ್ತ ಕಾಂತರಾಜ, ಪ್ರಭಾರಿ ತಹಸೀಲ್ದಾರ್‌ ರಮೇಶ ಹೆಗಡೆ, ಹೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.