ಸಾರಾಂಶ
ತರಳಬಾಳು ಹುಣ್ಣಿಮೆ ಅಂಗವಾಗಿ ನಡೆದ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ತರಳಬಾಳು ಶ್ರೀಗಳು ಮತ್ತಿತರ ಗಣ್ಯರು ಪಾಲ್ಗೊಂಡರು.
ತರಳಬಾಳು ಹುಣ್ಣಿಮೆಯ ಪ್ರತಿಭಾನ್ವೇಷಣೆ ವೇದಿಕೆ ಉದ್ಘಾಟಿಸಿ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಶಿಕ್ಷಣದಲ್ಲಿ ಸಂಗೀತ, ನೃತ್ಯ, ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಒತ್ತಾಯ ಮಾಡಿದರು.ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಅಂಗವಾಗಿ ನಡೆದ ಪ್ರತಿಭಾನ್ವೇಷಣೆ ವೇದಿಕೆ ಉದ್ಘಾಟಿಸಿ ಆಶೀರ್ಚನ ನೀಡಿದರು.
ಶಾಲೆಗಳಲ್ಲಿ ಸಂಗೀತ ಶಿಕ್ಷಣವನ್ನು ಅಳವಡಿಸುವುದರಿಂದ ಮಕ್ಕಳಲ್ಲಿ ಸೂಕ್ಷ್ಮ ಸಂವೇದನೆ, ಏಕಾಗ್ರತೆ, ಅಧ್ಯಯನದಲ್ಲಿ ತಲ್ಲಿನತೆ ಮೂಡುತ್ತದೆ. ಆಹ್ಲಾದಕರ ಸಂಗೀತ ಮನದ ಸೆಳೆತ. ಅದು ಮನಸ್ಸಿಗೆ ಮುದ ನೀಡುತ್ತದೆ. ಮನದ ವಿಕಾಸಕ್ಕೆ ಸ್ಫೂರ್ತಿಯಾಗುತ್ತದೆ. ಸಾಹಿತ್ಯಕ್ಕೆ ಸಂಗೀತ ಸೇರಿದರೆ ಹಾಲು ಜೇನಿನಂತೆ ಆಗುತ್ತದೆ. ಸಂಗೀತವನ್ನು ಆಸ್ವಾದಿಸಲು ಸಂಸ್ಕಾರ ಬೇಕು ಎಂದರು.ದಾವಣಗೆರೆಯ ವಿಜೇತ ಕರ್ನಾಟಕ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಸುಧಾ ನಂದ ಹೆಗಡೆ ಮಾತನಾಡಿ, ಹಿಂದೂ ಸನ್ಯಾಸಿಗಳ ಪರಂಪರೆಯೇ ಜೀಸಸ್ ಕ್ರೈಸ್ತರ ರೂಪ. ಸಹಾನುಭೂತಿಯ ಕೇಂದ್ರವೇ ತರಳಬಾಳು ಮಠದ ಮೂಲ ರೂಪ. ಲಿಂಗಾಯಿತ ಪರಂಪರೆಯಲ್ಲಿ ಶ್ರೀಗಳ ಸಂಗೀತ ಪ್ರೇಮ, ಆದರ್ಶ ಗುಣ ಹಾಗೂ ರೈತರ ಪಾಲಿಗೆ ಬೆಳಕಾದ ಕೆರೆಗಳ ಪುನಶ್ಚೇತನ ಈ ಭಾಗದವರು ಪಡೆದ ಪುಣ್ಯವಾಗಿದೆ ಎಂದರು.
ಈ ವೇಳೆ ದಾವಣಗೆರೆಯ ಪತ್ರಕರ್ತ ಸದಾನಂದ ಹೆಗಡೆ ಮತ್ತು ಕ್ಷೇತ್ರ ಶಿಕ್ಷಣಾಕಾರಿ ಎಸ್.ನಾಗಭೂಷಣ್, ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ ಮುಂತಾದವರು ಭಾಗವಹಿಸಿದ್ದರು.