ಚಳಿಗಾಲದ ಅಧಿವೇಶನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಯು.ಟಿ. ಖಾದರ್‌

| Published : Oct 19 2024, 12:23 AM IST / Updated: Oct 19 2024, 12:24 AM IST

ಸಾರಾಂಶ

ಬರುವ ಡಿಸೆಂಬರ್‌ನಲ್ಲಿ ನಗರದಲ್ಲಿ ಜರುಗಲಿರುವ ವಿಧಾನಮಂಡಳ ಚಳಿಗಾಲ ಅಧೀವೇಶನವನ್ನು ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬರುವ ಡಿಸೆಂಬರ್‌ನಲ್ಲಿ ನಗರದಲ್ಲಿ ಜರುಗಲಿರುವ ವಿಧಾನಮಂಡಳ ಚಳಿಗಾಲ ಅಧೀವೇಶನವನ್ನು ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಸೂಚನೆ ನೀಡಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬೆಳಗಾವಿ ಚಳಿಗಾಲ ಅಧಿವೇಶನ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ‌ ವಹಿಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿ, ಸಚಿವರು, ಶಾಸಕರಿಗೆ ಅನಾನುಕೂಲವಾಗದಂತೆ ನಿಗಾವಹಿಸಬೇಕು. ಅಧಿವೇಶನಕ್ಕೆ ಬರುವ ಸಚಿವರು, ಶಾಸಕರು, ಸಚಿವಾಲಯದ‌ ಅಧಿಕಾರಿ, ಸಿಬ್ಬಂದಿ, ಚಾಲಕರು ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ವ್ಯವಸ್ಥಿತ ವಸತಿ, ಊಟೋಪಹಾರದ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.

ಸುವರ್ಣ ಸೌಧದ ಪ್ರವೇಶ ದ್ವಾರದಲ್ಲಿ ಜನ ಹಾಗೂ ಸಂಚಾರ ದಟ್ಟಣೆ ಆಗದಂತೆ ಕ್ರಮ ಕೈಗೊಳ್ಳಬೇಕು. ಪ್ರತಿಭಟನಾ ಸ್ಥಳ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನಿರಂತರವಾಗಿ ನಿಗಾವಹಿಸಬೇಕು. ಅಧಿವೇಶನ‌ದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಸುವರ್ಣ ಸೌಧದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಲಾಪಗಳ‌ ವೀಕ್ಷಣೆಗೆ ಆಗಮಿಸುವ ಶಾಲೆಗಳ ವಿವರಗಳನ್ನು‌ ಮುಂಚಿತವಾಗಿ ನೀಡಬೇಕು. ಮಕ್ಕಳಿಗೆ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕಳೆದ‌ ಬಾರಿಯಂತೆ ಈ ಬಾರಿಯು ಪ್ರತಿದಿನ ಬೇರೆ ಬೇರೆ ಜಿಲ್ಲೆಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಈ ಕಾರ್ಯಕ್ರಮಗಳಿಗೆ ಅಕ್ಕಪಕ್ಕದ‌ ಜಿಲ್ಲೆಗಳ ಕಲಾವಿದರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಅಧಿವೇಶನದ ವೇಳೆ ಅಂತರ್ಜಾಲ‌ ವ್ಯವಸ್ಥೆಯಲ್ಲಿ ಯಾವುದೇ ಅಡೆತಡೆ ಆಗದಂತೆ‌ ನೋಡಿಕೊಳ್ಳಬೇಕು. ಶಾಸಕರು, ಸಚಿವರು ವಾಸ್ತವ್ಯ ಮಾಡುವ ಹೋಟೆಲ್‌ಗಳಲ್ಲಿ ಸಾರ್ವಜನಿಕರ‌ ಭೇಟಿಗೆ ಲಾಂಜ್ ವ್ಯವಸ್ಥೆ ಮಾಡಬೇಕು. ಈ ಕುರಿತು ಹೋಟೆಲ್‌ ಮಾಲೀಕರೊಂದಿಗೆ ಸಭೆ ನಡೆಸಿ ಸೂಕ್ತ ನಿರ್ದೆಶನಗಳನ್ನು ನೀಡಲು ತಿಳಿಸಿದರು.

ಸುವರ್ಣ ಸೌಧದಲ್ಲಿ ಶಾಸಕರ‌ ಭವನ‌ ನಿರ್ಮಾಣ ಹಾಗೂ ನಿರಂತರ‌ ನೀರು‌‌‌ ಪೂರೈಕೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಹೊರಟ್ಟಿ ತಿಳಿಸಿದರು.

ಜಿಲ್ಲಾಧಿಕಾರಿ‌ ಮೊಹಮ್ಮದ್‌ ರೋಷನ್ ಮಾತನಾಡಿ, ಅಧಿವೇಶನ ವ್ಯವಸ್ಥಿತವಾಗಿ ಜರುಗಿಸುವ‌ ಹಿನ್ನೆಲೆಯಲ್ಲಿ ವಸತಿ, ಆಹಾರ‌ ಹಾಗೂ ಭದ್ರತಾ‌ ಸಮಿತಿ ರಚಿಸಿ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಚಿವಾಲಯದ ಅಧಿಕಾರಿ, ಸಿಬ್ಬಂದಿ, ವಾಹನ ಚಾಲಕರಿಗೆ ಸೂಕ್ತ‌ ವಸತಿ‌ ಹಾಗೂ ಊಟೋಪಹಾರ ಕಲ್ಪಿಸಲು ಸಭೆಯಲ್ಲಿ‌ ಚರ್ಚಿಸಲಾಗಿದೆ. ಭದ್ರತೆಗೆ ಸಂಬಂಧಿಸಿದಂತೆ ಸೂಕ್ತ‌ ವ್ಯವಸ್ಥೆ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ರಾಜು(ಆಸೀಫ್) ಸೇಠ್‌, ಕರ್ನಾಟಕ ವಿಧಾನ ಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಎಸ್ಪಿ ಡಾ.ಭೀಮಾಶಂಕರ‌ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಪ್ರಶಿಕ್ಷಣಾರ್ಥಿ ಐ.ಎಸ್. ಅಧಿಕಾರಿ ದಿನೇಶಕುಮಾರ್ ಮೀನಾ, ವಿವಿಧ ಇಲಾಖೆಗಳ‌ ಅಧಿಕಾರಿಗಳು ಇದ್ದರು.

ಸುವರ್ಣಸೌಧ ಸಮರ್ಪಕ ನಿರ್ವಹಣೆಗೆ ನಿರ್ದೇಶನ:ಸಭೆಗೂ ಮುಂಚೆ ಸಭಾಧ್ಯಕ್ಷ ಯು.ಟಿ.ಖಾದರ್‌ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸುವರ್ಣಸೌಧದ ವಿವಿಧ ಸಭಾಂಗಣಗಳನ್ನು ವೀಕ್ಷಿಸಿದರು‌. ಸ್ವಚ್ಛತಾ ಸಿಬ್ಬಂದಿಯನ್ನು ಮಾತನಾಡಿಸಿದ ಸಭಾಧ್ಯಕ್ಷರು ದೈನಂದಿನ ಸ್ವಚ್ಛತಾ ಕೆಲಸದ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ವಿಧಾನ ಸಭೆ, ವಿಧಾನ‌ ಪರಿಷತ್ ಸಭಾಂಗಣಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಸ್ವಚ್ಛತೆ, ಆಸನಗಳ ನಿರ್ವಹಣೆ, ಪ್ರವೇಶ ದ್ವಾರದ ಬ್ಯಾಗೇಜ್ ಸ್ಕ್ಯಾನರ್ ಮತ್ತಿತರ ವ್ಯವಸ್ಥೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.