ಸಾರಾಂಶ
ಸುರಪುರ: ಜ.26ರಂದು ನಡೆಯುವ ಗಣರಾಜೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿ ವರ್ಷದಂತೆ ಈ ವರ್ಷವು ಅದ್ಧೂರಿಯಾಗಿ ಆಚರಿಸಬೇಕು ಎಂದು ತಹಸೀಲ್ದಾರ್ ಕೆ. ವಿಜಯಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾರ್ದ ಅವರು, ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಅಚರಿಸಲು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಇಲಾಖೆಯ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.ಅಂದು ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಆರೋಗ ಕೇಂದ್ರ, ಅಂಗನವಾಡಿ ಕೇಂದ್ರಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ, ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಬೇಕು. ನಂತರ ಇಲ್ಲಿನ ಪ್ರಭು ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ವತಿಯಿಂದ 8:45ಕ್ಕೆ ಧ್ವಜಾರೋಹಣ ನೆರವೇರಲಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಮೈದಾನದಲ್ಲಿ ವೇದಿಕೆ ಸಿದ್ಧತೆ, ಪಥಸಂಚಲನ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಕುಡಿಯುವ ನೀರು, ಅಲ್ಪೋಪಾಹಾರ ವ್ಯವಸ್ಥೆ ಮಾಡಬೇಕು. ಸಮಾರಂಭದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಐವರು ಸರ್ಕಾರಿ ನೌಕರರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ. ಸಾಹಿತಿ, ಸಂಗೀತ ಕಲಾವಿದ, ಪತ್ರಕರ್ತರಿಗೂ ಸನ್ಮಾನಿಸಿ ಗೌರವಿಸಲಾಗುವುದು ಎಂದರು.ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ದಂಡು, ಸಿಪಿಐ ಆನಂದ ವಾಗ್ಮೋರೆ, ತಾಪಂ ಇಒ ಬಸವರಾಜ ಸಜ್ಜನ, ತಾಲೂಕು ಆರೋಗ್ಯಧಿಕಾರಿ ಡಾ. ಆರ್.ವಿ. ನಾಯಕ, ಸಣಕೇಪ್ಪ, ಉಪ ನೋಂದಣಾಧಿಕಾರಿ ಗುರುರಾಜ ಸಜ್ಜನ್, ಮೊಹ್ಮದ್ ಸಲೀಂ, ಶಾಸಕರ ಆಪ್ತ ಸಹಾಯಕ ಶಿವರಾಜ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು.