ವಿಕಸಿತ ಭಾರತ ನಿರ್ಮಾಣಕ್ಕಾಗಿ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ತರಲಾಗಿದೆ ಎಂದು ಬಳ್ಳಾರಿ ಕ್ಷೇತ್ರದ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದರು.

ಕುರುಗೋಡು: ವಿಕಸಿತ ಭಾರತ ನಿರ್ಮಾಣಕ್ಕಾಗಿ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ತರಲಾಗಿದೆ ಎಂದು ಬಳ್ಳಾರಿ ಕ್ಷೇತ್ರದ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಬಿ-ಜಿ ರಾಮ್ ಜಿ ಯೋಜನೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

ಗ್ರಾಮೀಣ ಜನರ ಸ್ವಾವಲಂಬಿ ಬದುಕಿನ ಭರವಸೆಯ ದೂರದೃಷ್ಟಿಯ ವಿಬಿ-ಜಿ ರಾಮ್ ಜಿ ಯೋಜನೆ ಪಾರದರ್ಶಕ ನಿರ್ವಹಣೆ, ತಂತ್ರಜ್ಞಾನದ ಕಾವಲು ಮತ್ತು ಶಾಶ್ವತ ಗ್ರಾಮೀಣ ಮೂಲ ಸೌಕರ್ಯಕ್ಕೆ ಸಹಕಾರಿಯಾಗಿರುವ ಯೋಜನೆ ಕುರಿತು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ಮುಟ್ಟಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಯಂತ್ರಿಸಲು ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಹೆಚ್ಚು ತೆರಿಗೆ ವಿಧಿಸಿದ್ದರು. ಭಾರತ ಏಷ್ಯಾ ದೇಶಗಳೊಂದಿಗೆ ಕನಿಷ್ಠ ತೆರಿಗೆಯೊಂದಿಗೆ ಒಪ್ಪಂದ ಮಾಡಿಕೊಂಡ ಪರಿಣಾಮ ಅಮೇರಿಕಾ ಶೇ. ೫೦ರಿಂದ ಶೇ. ೧೮ಕ್ಕೆ ತೆರಿಗೆ ಪ್ರಮಾಣ ಇಳಿಸುವ ಮೂಲಕ ಸ್ನೇಹಕ್ಕೆ ಮುಂದಾಗಿದೆ. ಇದು ಪ್ರಧಾನಿ ನರೇಂದ್ರಮೋದಿ ಅವರ ಶಕ್ತಿ ಎಂದು ಬಣ್ಣಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ತಿಮ್ಮಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆ ಕುರಿತು ರಾಜ್ಯದ ಕಾಂಗ್ರೆಸ್ ನಾಯಕರು ನಕಲಿ ಗಾಂಧಿಗಳ ಸ್ವಾಮಿ ನಿಷ್ಠೆ ಮೆರೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮ. ನರೇಗಾ ಯೋಜನೆಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದಿರುವುದು ಬಯಲಾಗಿದೆ. ಬಡವರ ಜಾಬ್‌ ಕಾರ್ಡ್‌ಗಳನ್ನು ದುರ್ಬಳಕೆ ಮಾಡಿಕೊಂಡು ಯೋಜನೆಯ ಹಣ ಕಬಳಿಸುತ್ತಿದ್ದರು. ಯೋಜನೆಯ ಹಣ ನೇರವಾಗಿ ಫಲಾನುಭವಿಗಳ ಕೈಗೆ ಸೇರುವಂತೆ ಮಾಡಿರುವುದರಿಂದ ಕಾಂಗ್ರೆಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ ಎಂದು ಆರೋಪಿಸಿದರು. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಯೋಜನೆ ಕುರಿತು ಪ್ರಚಾರ ಮಾಡಬೇಕು ಎಂದರು.

ಗಾಂಧಿ ಹೆಸರು ತೆಗೆದು ಕೇಂದ್ರ ಸರ್ಕಾರ ಅವಮಾನ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದೆ. ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಜಾರಿಗೆ ತಂದು ಗುಡಿಕೈಗಾರಿಕೆಗಳಿಗೆ ಶಕ್ತಿ ತುಂಬುವ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಾರಿಗೆ ತಂದಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನೀಲ್ ಕುಮಾರ್ ಮೋಕಾ, ಪ್ರಧಾನ ಕಾರ್ಯದರ್ಶಿ ಸುರೇಶ್, ಕಂಪ್ಲಿ ಮಂಡಲ ಅಧ್ಯಕ್ಷ ಮಹದೇವ, ಮುಖಂಡರಾದ ಗಾಳಿ ಶಂಕ್ರಪ್ಪ, ಜೆ.ಸೋಮಶೇಖರಗೌಡ, ತಿಪ್ಪೇರುದ್ರಗೌಡ ಮತ್ತು ಆಗಲೂರು ಲತಾ ಇದ್ದರು.