ಟ್ಯಾಂಕರ್ ನೀರಿನ ಬದಲು ಶಾಶ್ವತ ನೀರಿನ ವ್ಯವಸ್ಥೆ ಮಾಡಿ: ಶಾಸಕ ಭೀಮಣ್ಣ ನಾಯ್ಕ ಸೂಚನೆ

| Published : Mar 09 2025, 01:49 AM IST

ಟ್ಯಾಂಕರ್ ನೀರಿನ ಬದಲು ಶಾಶ್ವತ ನೀರಿನ ವ್ಯವಸ್ಥೆ ಮಾಡಿ: ಶಾಸಕ ಭೀಮಣ್ಣ ನಾಯ್ಕ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಬಾರಿ ಮಳೆಯ ಅಭಾವದಿಂದ ಕುಡಿಯುವ ನೀರಿನ ಅಭಾವ ಉಂಟಾಗಿತ್ತು.

ಶಿರಸಿ: ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬರುವ ಊರುಗಳನ್ನು ಗುರುತಿಸಿ ನೀರಿನ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳವುದರ ಜತೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಬದಲು ಶಾಶ್ವತ ನೀರಿನ ವ್ಯವಸ್ಥೆಗೆ ಚಿಂತನೆ ನಡೆಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶನಿವಾರ ನಗರದ ತಾಲೂಕು ಸೌಧಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವು ಲಭ್ಯತೆ ಕುರಿತು ಪೂರ್ವ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸಲಹೆ-ಸೂಚನೆ ನೀಡಿದರು. ಕಳೆದ ವರ್ಷ ನೀರಿನ ಸಮಸ್ಯೆ ಉದ್ಭವಿಸಿದ ಪ್ರದೇಶಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.

ಹಿಂದಿನ ಬಾರಿ ಮಳೆಯ ಅಭಾವದಿಂದ ಕುಡಿಯುವ ನೀರಿನ ಅಭಾವ ಉಂಟಾಗಿತ್ತು. ಆದರೂ ಸಹ ಕುಡಿಯುವ ನೀರನ್ನು ಯಶಸ್ವಿಯಾಗಿ ಪೂರೈಕೆ ಮಾಡಲಾಗಿತ್ತು. ಎಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸ್ಥಳೀಯ ಗ್ರಾಪಂಗಳ ಮಾಹಿತಿಯನ್ನು ಪಡೆದುಕೊಂಡು ಜೆಜೆಎಂ ಕೆಲಸ ಮಾಡಬೇಕು. ಮಲೆನಾಡು ಭಾಗದಲ್ಲಿ ದನಕರುಗಳಿಗೆ ಮೇವಿನ ಕೊರತೆ ಉಂಟಾಗುವುದು ತೀರಾ ಕಡಿಮೆ. ಆದರೂ ಅವಶ್ಯಕತೆ ಇದ್ದಲ್ಲಿ ಪೂರೈಕೆ ಮಾಡಬೇಕು. ಇ ಸ್ವತ್ತು ಕಾರ್ಯ ರೂಪಕ್ಕೆ ಬಂದಿದೆ. ಗ್ರಾಪಂಗಳಲ್ಲಿ ಗೊಂದಲಗಳಿತ್ತು. ಗೊಂದಲಗಳಿಗೆ ಸರಿಯಾದ ಮಾಹಿತಿಯನ್ನು ನೀಡಲಾಗಿದೆ. ಇ ಸ್ವತ್ತಿನ ಸಮಸ್ಯೆ ಗಳಿರುವವರನ್ನು ಪತ್ತೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದರು.

ತಹಸೀಲ್ದಾರರಿಂದ ಸರಿಯಾದ ಮಾಹಿತಿ ಪಡೆದು ಕರಪತ್ರಗಳನ್ನು ಮುದ್ರಿಸಿ ಜನರಿಗೆ ತಿಳಿಸುವ ಕಾರ್ಯ ಮಾಡಬೇಕಿದೆ. ಒಟ್ಟಿನಲ್ಲಿ ಇ ಸ್ವತ್ತು ಸಮಸ್ಯೆ ಯಿಂದ ಜನರು ಮುಕ್ತರಾಗಬೇಕಿದೆ. ಇ ಸ್ವತ್ತು ಸರ್ಕಾರದ ಆದೇಶ. ಯಾರೂ ಸಹ ನಿರ್ಲಕ್ಷ್ಯ ಮಾಡುವಂತಿಲ್ಲ. ಸರ್ಕಾರದ ಸುತ್ತೋಲೆಯನ್ನು ಅನುಸರಿಸಬೇಕು. ಜೆಜೆಎಂ ಕಾಮಗಾರಿ ಯು ಕೆಲವೆಡೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸೊಂದಾ ಗ್ರಾಪಂ ಅಧ್ಯಕ್ಷರು ಆರೋಪಿಸಿದರು.

ಹುಲೇಕಲ್ ಪಂಚಾಯತ್ ನಲ್ಲಿ ಮೂರು ಜೆಜೆಎಂ ಇದೆ. ಗ್ರಾಮೀಣ ಭಾಗದಲ್ಲಿ ನೀರಿನ ಅಭಾವ ಬರುತ್ತಿದೆ. ಬಾವಿ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಬಕ್ಕಳ ಶಾಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ ಎಂದು ಹುಲೇಕಲ್ ಗ್ರಾಪಂ ಅಧ್ಯಕ್ಷರು ತಿಳಿಸಿದರು.

ಜೆಜೆಎಂನವರು ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡದೇ ಕೆಲಸ ಮಾಡುತ್ತಿದ್ದಾರೆ ಎಂದು ಯಡಳ್ಳಿ ಗ್ರಾಪಂ ಅಧ್ಯಕ್ಷರು ಆರೋಪಿಸಿದರು.

ತಣ್ಣೀರು ಹೋಳೆ ಪ್ರದೇಶದಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಪಂಚಾಯತ್ ಪಿಡಿಒ ಶಾಸಕರ ಗಮನಕ್ಕೆ ತಂದರು.

ಇದೇ ವೇಳೆ ಆರಾಧನಾ ಯೋಜನೆಯಡಿ ದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ವೀರಾಂಜನೇಯ ದೇವಸ್ಥಾನಕ್ಕೆ ೪೦ ಸಾವಿರ ರೂ. ಮೌಲ್ಯದ ಚೆಕ್‌ನನ್ನು ವಿತರಿಸಲಾಯಿತು.

ಸಭೆಯಲ್ಲಿ ತಹಸೀಲ್ದಾರ ಶ್ರೀಧರ ಮುಂದಲಮನಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತಾಪಂ ಇಒ ಸತೀಶ ಹೆಗಡೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಇದ್ದರು.