ಸಾರಾಂಶ
ಹುಬ್ಬಳ್ಳಿ:
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬರೋಬ್ಬರಿ 11.50 ಲಕ್ಷ ಮತಗಳು ಅಹಿಂದಕ್ಕೆ ಸೇರಿವೆ. ಇವುಗಳನ್ನು ಒಟ್ಟಾಗಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಎಲ್ಲರು ಶ್ರಮಿಸಬೇಕಿದೆ ಎಂದು ಅಹಿಂದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಶೇಖರ ಕರಡಿಕೊಪ್ಪ ಅಭಿಪ್ರಾಯಪಟ್ಟರು.ಇಲ್ಲಿನ ಎ.ಜೆ. ಮುಧೋಳ ಭವನದಲ್ಲಿ ಅಹಿಂದ ಸಂಘಟನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ಕೆಲ ವರ್ಷಗಳಿಂದ ಅಹಿಂದ ಸಂಘಟನೆ ಶಾಂತವಾಗಿತ್ತು. ಇದೀಗ ಮತ್ತೆ ಅಸ್ತಿತ್ವಕ್ಕೆ ತರಲಾಗಿದೆ. ಕಳೆದ ಜನವರಿಯಲ್ಲಿ ನೋಂದಣಿ ಕೂಡ ಮಾಡಿಸಲಾಗಿದೆ. ಮುಂದೆ ಅಹಿಂದ ಸಂಘಟನೆಯಿಂದ ಬೃಹತ್ ಸಮಾವೇಶ ನಡೆಸಲಾಗುವುದು. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರನ್ನು ಒಗ್ಗೂಡಿಸುವುದು. ಎರಡನೆಯ ಸ್ತರದ ನಾಯಕರನ್ನು ಬೆಳೆಸುವುದೇ ಅಹಿಂದ ಸಂಘಟನೆಯ ಉದ್ದೇಶ ಎಂದರು.ಇದೀಗ ಧಾರವಾಡ ಕ್ಷೇತ್ರದಲ್ಲಿ 11.50 ಅಹಿಂದ ಮತಗಳಿವೆ. ಅವುಗಳು ಎಲ್ಲಿ ಚೆಲ್ಲಾಪಿಲ್ಲಿಯಾಗಿ ಹರಿದು ಹಂಚಿಹೋಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಅಹಿಂದ ಮತ ಬೀಳುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರು ಶ್ರಮಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಗರು ಮನುವಾದಿ, ಸರ್ವಾಧಿಕಾರಿ ಧೋರಣೆಯಲ್ಲಿ ನಂಬಿಕೆ ಇಟ್ಟವರು. ಸಂವಿಧಾನ ವಿರೋಧಿಗಳಾಗಿದ್ದಾರೆ. ಈ ಚುನಾವಣೆ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.ನೂತನ ಪದಾಧಿಕಾರಿಗಳ ಪದಗ್ರಹಣವೂ ಇದೇ ವೇಳೆ ನಡೆಯಿತು. ಅಧ್ಯಕ್ಷತೆಯನ್ನು ಅಹಿಂದ ಸಂಘಟನೆಯ ಮಹಾನಗರ ಜಿಲ್ಲಾಧ್ಯಕ್ಷ ಬಾಬಾಜಾನ್ ಮುಧೋಳ ವಹಿಸಿದ್ದರು. ಧಾರವಾಡ ಗ್ರಾಮೀಣ ಅಹಿಂದ ಜಿಲ್ಲಾಧ್ಯಕ್ಷ ಮುತ್ತಣ್ಣ ಶಿವಳ್ಳಿ, ದಲಿತ ಮುಖಂಡ ಡಿ.ಡಿ. ಮಾಚಣ್ಣವರ್, ಸಾಮಾಜಿಕ ಹೋರಾಟಗಾರ ರಾಜಶೇಖರ್ ಮೆಣಸಿನಕಾಯಿ, ಅಖಿಲ ಭಾರತ ರೈಲ್ವೆ ಎಸ್ಸಿ-ಎಸ್ಟಿ ನೌಕರರ ಸಂಘದ ಪದಾಧಿಕಾರಿ ಎಂ. ರವೀಂದ್ರನ್, ಕಾರ್ಮಿಕ ಮುಖಂಡ ಬಿ.ಎ. ಮುಧೋಳ, ಜೆ. ಶೇಡ್ರಿಕ ಹಾಗೂ ಇಸೂಫ್‌ಖಾನ್ ಬಳ್ಳಾರಿ, ಮುಖಂಡರಾದ ಕರಿಯಪ್ಪ ಬಿಜಕತ್ತಿ, ಮಹಾಂತೇಶ ಗುಡಿಯನಕಟ್ಟಿ, ಮುದುಕಪ್ಪ ಬೆಳ್ಳಿಗಟ್ಟಿ, ಪೀರಸಾಬ್ ನದಾಫ್, ಮುದುಕಣ್ಣ ತಳವಾರ, ಗಂಗಾಧರ ಪಾನಿಗಟ್ಟಿ, ಸಾಧಿಕ ಪಸ್ಕಿ, ಶರೀಫ ಗುದಗಿ, ಜೆ. ವಿಜಯಕುಮಾರ್, ಕರಿಮ್ ಲಕ್ಕುಂಡಿ, ಭಾಷಾ ಟಾಕಿವಾಲೆ, ಸಾಧಿಕ್ ದೌಡಿ, ಕಾಮನಹಳ್ಳಿ ಮೀರಾ ಮೇರಣ್ಣವರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.