ಕನ್ನಡಪ್ರಭ ವಾರ್ತೆ ಹೊನ್ನಾವರ
ಮತದಾನಕ್ಕೆ ಅರ್ಹ ಮತದಾರ ಗುರುತಿಸುವ ಕಾರ್ಯ ದೇಶಾದ್ಯಂತ ನಡೆಯುತ್ತಿದೆ. ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ೨೧೫ ಬೂತ್ ಇದ್ದು, ಜೆಡಿಎಸ್ ವತಿಯಿಂದ ಬಿ.ಎಲ್.ಎ ೨ ನೇಮಕವಾಗಿದ್ದು, ಮತಪಟ್ಟಿಯಿಂದ ಅರ್ಹರ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಕಾರ್ಯಕರ್ತರಿಗೆ ಕರೆ ನೀಡಿದರು.ಕರ್ಕಿಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಕುಮಟಾ ಹೊನ್ನಾವರ ಕ್ಷೇತ್ರದ ಜೆಡಿಎಸ್ ಘಟಕದ ಬೂತ್ ಬಿ.ಎಲ್.ಎ 2 ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂರು ಬಾರಿ ಸೋತಿದ್ದೇನೆ, ರಾಜಕಾರಣ ಬೇಡ ಎಂದುಕೊಂಡಿದ್ದೆ. ಕಳೆದ ಬಾರಿ ಕೇವಲ 676 ಮತದಿಂದ ಸೋತಾಗ ಪಕ್ಷದ ಹಿರಿಯರು, ಹಿತೈಷಿಗಳು ಮುಂದಿನ ಬಾರಿ ಗೆಲುವು ನಮ್ಮದೇ ಎಂದು ಧೈರ್ಯ ತಂಬಿದರು. ಮುಂಬರುವ ಗ್ರಾಪಂ, ಜಿಪಂ ಚುನಾವಣೆಯಲ್ಲಿ ನೀವೂ ಗೆಲ್ಲಬೇಕು, ನನ್ನನು ಗೆಲ್ಲಿಸಿ ಎಂದು ವಿನಂತಿಸಿದರು.ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮತದಾನದ ಮೂಲಕವಾಗಿದೆ. ಮನೆ ಮನೆಗೆ ತೆರಳಿ ಬಿ.ಎಲ್‌ಓ ಫಾರಂ ತುಂಬಿಸುತ್ತಾರೆ. ಈ ಸಮಯದಲ್ಲಿ ಯಾವುದೋ ಕಾರಣದಿಂದ ಅರ್ಹರಾಗಿದ್ದವರು, ಮತಪಟ್ಟಿಯಿಂದ ಹೆಸರು ತಪ್ಪದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕಿದೆ. ಮತದಾರರಿಗೆ ನ್ಯಾಯ ಕೊಡಿಸುವ ಪರಿಷ್ಕರಣೆಯೊಂದಿಗೆ ನಾವೆಲ್ಲರೂ ಪಾಲ್ಗೊಳ್ಳಬೇಕು. ಮತದಾರರ ಪಟ್ಟಿಯಿಂದ ಅರ್ಹರಿದ್ದು ಹೆಸರು ಡಿಲೀಟ್ ಮಾಡಿದಾಗ ಪ್ರಶ್ನೆ ಮಾಡಿ ದೂರು ನೀಡುವ ಅಧಿಕಾರ ಬಿಎಲ್ ಎ 2ಗಳಿಗೆ ಇದೆ. ತಾವೆಲ್ಲರೂ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಪರಿಷ್ಕರಣೆ ನಡೆಯುತ್ತಿದೆ. ಪಕ್ಷ ಗೆಲುವು ಸಾಧಿಸಬೇಕಾದರೆ ಮತಪಟ್ಟಿ ಪರಿಷ್ಕರಣೆಯತ್ತ ವಿಶೇಷ ಗಮನ ಹರಿಸಬೇಕಿದೆ ಎಂದರು
ಜೆಡಿಎಸ್ ಕೋಶಾಧ್ಯಕ್ಷ ಉಪೇಂದ್ರ ಪೈ, ಪ್ರಧಾನ ಕಾರ್ಯದರ್ಶಿ ಸತೀಶ ಹೆಗಡೆ, ಪಕ್ಷದ ಮುಖಂಡರಾದ ವಿ.ಎಂ. ಭಂಡಾರಿ, ಪಿ.ಟಿ. ನಾಯ್ಕ, ದತ್ತು ಪಟಗಾರ, ಕೆ.ಜೆ. ಭಟ್, ಉದಯ ಗೌಡ, ಪ್ರದೀಪ ಕುಮಾರ, ಕೃಷ್ಣ ಗೌಡ, ಬಲೀಂದ್ರ ಗೌಡ, ಯಶವಂತ ಗೌಡ, ರತ್ನಾಕರ ನಾಯ್ಕ, ಮೋಹನ ನಾಯ್ಕ, ಗೋವಿಂದ ಗೌಡ, ಮೋಹಿನಿ ನಾಯ್ಕ ಮತ್ತಿತರಿದ್ದರು. ಹೊನ್ನಾವರ ತಾಲೂಕ ಅಧ್ಯಕ್ಷ ಟಿ.ಟಿ. ನಾಯ್ಕ ಮಾತನಾಡಿದರು. ಕುಮಟಾ ತಾಲೂಕು ಅಧ್ಯಕ್ಷ ಸಿ.ಜೆ. ಹೆಗಡೆ ಸ್ವಾಗತಿಸಿ, ಬಿ.ಎಲ್. ಸೃಜನ್ ಕಾರ್ಯಕ್ರಮ ನಿರ್ವಹಿಸಿದರು.