ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಸಮರ್ಪಕವಾಗಿ ಸರಬರಾಜಾಗುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ತೈಲ ಪೂರೈಕೆ ವಿಷಯದಲ್ಲಿ ಕಂಪನಿಗಳು ಜಾಗರೂಕತೆ ವಹಿಸಿ, ಸಮಸ್ಯೆ ಬಾರದ ರೀತಿಯಲ್ಲಿ ಇಂಧನ ಪೂರೈಸಬೇಕು. ಉಳಿದ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಅಗತ್ಯತೆಗೆ ಅನುಸಾರವಾಗಿ ತೈಲ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ. ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಆಯಿಲ್ ಕಂಪನಿಯ ಮಾರಾಟಾಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಂಗಾರು ಆರಂಭವಾಗಿದ್ದು, ಏಳೂವರೆ ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರೈತರ ಉಳುಮೆ ಕಾರ್ಯ ನಡೆಯುತ್ತಿದೆ. ಹಾಗಾಗಿ ರೈತರಿಗೆ ಯಾವುದೇ ಅನಾನುಕೂಲ ಹಾಗೂ ಸಮಸ್ಯೆ ಆಗದಂತೆ ಇಂಧನ ಪೂರೈಸಬೇಕು. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ನಿಗಾ ವಹಿಸಬೇಕು ಎಂದ ಅವರು, ಜಿಲ್ಲಾಡಳಿತ ಸ್ಪ್ರೆಡ್ ಶೀಟ್ ನಲ್ಲಿ ದೈನಂದಿನ ಮಾಹಿತಿ ಕ್ರೋಢಿಕರಿಸುತ್ತದೆ ಎಂದರು.

ತೈಲ ಕಂಪನಿ ಪ್ರತಿನಿಧಿಗಳು ಮಾತನಾಡಿ, ಜಿಲ್ಲೆಯಲ್ಲಿ ಇಂಧನದ ಕೊರತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸುವುದರ ಜೊತೆಗೆ ಇಂಡೆಂಟ್ ಅನುಗುಣವಾಗಿ ಇಂಧನ ಪೂರೈಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಗ್ರಾಹಕರಿಗೆ ತೈಲ ವಿತರಿಸುವಾಗ ಯಾವುದೇ ವ್ಯತ್ಯಾಸ ಆಗದಂತೆ ನಿಯಮಾನುಸಾರ, ಪ್ರಮಾಣ ಬದ್ಧವಾಗಿ ಮತ್ತು ಪಾರದರ್ಶಕವಾಗಿ ವಿತರಿಸಲು ಸಭೆಯಲ್ಲಿ ಸೂಚಿಸಲಾಯಿತು.

ಗ್ರಾಹಕರ ಹಿತರಕ್ಷಣೆ, ಇಂಧನ ಸುರಕ್ಷತೆ ಮತ್ತು ನಿಯಮಾವಳಿಗಳ ಪಾಲನೆ ಕುರಿತು ಚರ್ಚೆ ನಡೆಸಲಾಯಿತು. ಪ್ರತಿ ಪೆಟ್ರೋಲ್ ಪಂಪಿನಲ್ಲಿ ಪ್ರತಿದಿನ ಲಭ್ಯವಿರುವ ಇಂಧನದ ದಾಸ್ತಾನು ಹಾಗೂ ದರದ ಮಾಹಿತಿಯನ್ನು ಗ್ರಾಹಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಯಿತು.


ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್ 71, ಐಒಸಿಎಲ್ 135, ಎಚ್‌ಪಿಸಿಎಲ್ 74 ಇದ್ದು, ಜಿಯೋಬಿಪಿ 12, ಎಂಆರ್‌ಪಿಎಲ್ 02 ಹಾಗೂ ನಾಯರ 18 ಒಳಗೊಂಡಂತೆ ಒಟ್ಟು 312 ಪೆಟ್ರೋಲ್ ಬಂಕ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಮಾಹಿತಿಗಾಗಿ ಸಂಪರ್ಕಿಸಿ: ಆಹಾರ ಇಲಾಖೆಯ ಆಲಮೇಲ, ಸಿಂದಗಿ ಹಾಗೂ ದೇವರಹಿಪ್ಪರಗಿ ಆಹಾರ ಇಲಾಖೆ ಶಿರಸ್ತೇದಾರ ಬಸವರಾಜ ಭೋವಿ (ಮೊ: 9741097476), ಬಸವನ ಬಾಗೇವಾಡಿ, ನಿಡಗುಂದಿ ಹಾಗೂ ಕೋಲಾರ ತಾಲೂಕಿನ ಆಹಾರ ಶಿರಸ್ತೇದಾರ ಸಂಜಯ ಹಳ್ಳೂರ (ಮೊ: 9902424912), ಮುದ್ದೇಬಿಹಾಳ ಹಾಗೂ ತಾಳಿಕೋಟೆ ಆಹಾರ ಶಿರಸ್ತೇದಾರ ಶಶಿಧರ ಕುಮಚಗಿ (ಮೊ: 9986896628), ಇಂಡಿ ಹಾಗೂ ಚಡಚಣ ತಾಲೂಕಿನ ಆಹಾರ ಶಿರಸ್ತೇದಾರ ಪರಮಾನಂದ ಹೂಗಾರ (ಮೊ: 7760826036), ವಿಜಯಪುರ ತಾಲೂಕಿನ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ (ಮೊ: 8095312999), ತಿಕೋಟಾ ತಾಲೂಕಿನ ಆಹಾರ ನಿರೀಕ್ಷಕ ಎಂ.ಎ.ಅಕ್ಕಲಕೋಟ (ಮೊ: 9606347850) ಹಾಗೂ ಬಬಲೇಶ್ವರ ತಾಲೂಕಿನ ಆಹಾರ ನಿರೀಕ್ಷಕ ಎಚ್.ಕೆ.ಬಿಳೇಕುದರಿ (ಮೊ: 9945490872) ಇವರನ್ನು ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ತಾಂಡೂರ ಸೇರಿದಂತೆ ಜಿಲ್ಲೆಯ ಎಲ್ಲಾ ತೈಲ ಕಂಪನಿಗಳ ಮಾರಾಟ ಅಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲೆಯ ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಆದರೆ, ಅವಶ್ಯಕತೆ ಅನುಸಾರ ಮಾತ್ರವೇ ಇಂಧನ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಸಲಹೆ ಮಾಡಿದರು. ಜಿಲ್ಲೆಗೆ ವಿವಿಧ ತೈಲ ಕಂಪನಿ ವಿತರಕರು ಸಮರ್ಪಕವಾಗಿ ಪೆಟ್ರೋಲ್ ಮತ್ತು ಡಿಸೇಲ್ ಪೂರೈಸಬೇಕು. ಎಲ್ಲ ಬಂಕ್ ಮಾಲೀಕರು ದೈನಂದಿನ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು. ಸಾರ್ವಜನಿಕರ ಬೇಡಿಕೆಯ ಅನುಸಾರ ಇಂಧನ ಪೂರೈಸಲು ಮಾರಾಟಗಾರರು ಅಗತ್ಯ ಕ್ರಮ ಕೈಗೊಳ್ಳಬೇಕು.

-ಡಾ.ಆನಂದ.ಕೆ., ಜಿಲ್ಲಾಧಿಕಾರಿ