ಸಾರಾಂಶ
ಗಿಡ, ಮರಗಳ ಸಂರಕ್ಷಣೆಯ ಕುರಿತು ಜಾಗೃತಿ ಆಂದೋಲನ ಮೊಹರಂ ಸಮಯದಲ್ಲಿ ಆದಾಗ ಮಾತ್ರ ಪರಿಸರ ನಾಶ ನಿಲ್ಲಲಿದೆ ಎಂದು ಸಾಹಿತಿ ಅಲ್ಲಾಗಿರಿರಾಜ ಹೇಳಿದರು.
ಕನಕಗಿರಿ: ಗಿಡ, ಮರಗಳನ್ನು ಕಡಿದು ಸುಡುವುದು ಮೊಹರಂ ಹಬ್ಬವಲ್ಲ. ಸಸಿ ನೆಡುವ ಮೂಲಕ ವಾತಾವರಣವನ್ನು ಹಚ್ಚ ಹಸಿರಿನಿಂದ ಕಂಗೊಳಿಸುವ ಹಬ್ಬವಾಗಬೇಕು ಎಂದು ಸಾಹಿತಿ ಅಲ್ಲಾಗಿರಿರಾಜ ಹೇಳಿದರು.
ಅವರು ಪಟ್ಟಣದ ಪಿಂಜಾರ ಓಣಿ ಯುವಕರು ಹಮ್ಮಿಕೊಂಡಿದ್ದ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ವರ್ಷ ಮೊಹರಂ ಹಬ್ಬದ ಹೆಸರಿನಲ್ಲಿ ನೂರಾರು ಗಿಡ-ಮರಗಳು ಅಲಾಯಿ ಕುಣಿಯಲ್ಲಿ ಹೋಮವಾಗುತ್ತಿವೆ. ಮರ ಕಡಿದವರು ಐದು-ಹತ್ತು ಸಸಿಗಳನ್ನು ನೆಡುವ ಕೆಲಸ ಮಾಡಿದರೆ ವಾತಾವರಣ ಹಸಿರಾಗಿ ಅನೇಕ ಜನರಿಗೆ ಆಮ್ಲಜನಕ, ನೆರಳು ನೀಡಲಿವೆ. ಪಟ್ಟಣದ ಜನತೆಗೆ ಗಿಡ, ಮರಗಳ ಸಂರಕ್ಷಣೆಯ ಕುರಿತು ಜಾಗೃತಿ ಆಂದೋಲನ ಮೊಹರಂ ಸಮಯದಲ್ಲಿ ಆದಾಗ ಮಾತ್ರ ಪರಿಸರ ನಾಶ ನಿಲ್ಲಲಿದೆ ಎಂದರು.ಇನ್ನೂ ಭಾರತದಲ್ಲಿ ಮೊಹರಂ ಭಾವೈಕ್ಯತೆಯ ಸಂಕೇತವಾಗಿದೆ. ಮನುಷ್ಯರಿಗೆ ನಿಸರ್ಗವೂ ಭಾವೈಕ್ಯತೆಯ ಸಂಗಮವಾಗಿದೆ. ಶುದ್ಧ ನೀರು, ಗಾಳಿ ಬೆಳಕು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಅದೇ ರೀತಿ ಮರವನ್ನು ದೇವರ ಹೆಸರಿನಲ್ಲಿ ಕಡಿದು ಸುಡುವ ಹಕ್ಕು ಯಾವ ನಾಗರಿಕತೆಗೆ ಇಲ್ಲ. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಆಚರಣೆಯ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಪರಿಸರಸ್ನೇಹಿ ಮೊಹರಂ ಆಚರಿಸಬೇಕು ಎಂದು ಹೇಳಿದರು.
ಮುಖಂಡರಾದ ವಾಗೀಶ ಹಿರೇಮಠ, ಮಹಾಂತೇಶ ಸಜ್ಜನ, ಜಯಪ್ರಕಾಶರೆಡ್ಡಿ ಮಾದಿನಾಳ ಮಾತನಾಡಿ, ಪರಿಸರ ಉಳಿಸುವಂತೆ ಮನವಿ ಮಾಡಿದರು.ವನಪಾಲಕ ಶಿವಕುಮಾರ ವಾಲಿ, ಪಪಂ ಸದಸ್ಯರಾದ ಸಂಗಪ್ಪ ಸಜ್ಜನ, ಅಭಿಷೇಕ ಕಲುಬಾಗಿಲಮಠ, ಕಂಠಿರಂಗಪ್ಪ ನಾಯಕ, ಶೇಷಪ್ಪ ಪೂಜಾರ, ಪ್ರಮುಖರಾದ ಹುಸೇನಸಾಬ ಗೋರಳ್ಳಿ, ಖಾದರಸಾಬ್ ಗುಡಿಹಿಂದಲ, ಹನ್ಮಂತ ಬಸರಿಗಿಡ, ಮುನಿರಪಾಷ ಕಲ್ಮನಿ, ತಿಪ್ಪಣ್ಣ ಗುರಿಕಾರ ಇತರರು ಇದ್ದರು.