ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿಸಿ

| Published : Apr 09 2024, 12:53 AM IST

ಸಾರಾಂಶ

ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಜೊತೆಗೆ, ಒಳ್ಳೆಯ ಸುಸಂಸ್ಕೃತಿಯನ್ನು ಅವರಲ್ಲಿ ಬೆಳೆಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಕೂಡಾ ಕಲಿಸಿ ಸಮಾಜಕ್ಕೆ ಹೆಸರು ತರುವಂತೆ ಬೆಳೆಸಬೇಕು.

ಕನ್ನಡಪ್ರಭ ವಾರ್ತೆ ಯಾದಗಿರಿ

ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಜೊತೆಗೆ, ಒಳ್ಳೆಯ ಸುಸಂಸ್ಕೃತಿಯನ್ನು ಅವರಲ್ಲಿ ಬೆಳೆಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಕೂಡಾ ಕಲಿಸಿ ಸಮಾಜಕ್ಕೆ ಹೆಸರು ತರುವಂತೆ ಬೆಳೆಸಬೇಕು. ಮಕ್ಕಳಿಗೆ ಜ್ಞಾನವೇ ಆಸ್ತಿಯಾಗಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಸಲಹೆ ನೀಡಿದರು.

ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನೌಕರರ ಕೇಂದ್ರ ಸಂಘ ಬೆಂಗಳೂರು. ಜಿಲ್ಲಾ ಶಾಖೆ ಯಾದಗಿರಿ ವತಿಯಿಂದ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವನ್ನು ಅರಿಯಬೇಕು. ಪ್ರತಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಕಡೆಗೆ ಸಮಯ ನೀಡಬೇಕು, ನೀವು ಪಡೆದ ಪುರಸ್ಕಾರದ ಹಿಂದೆ ನಿಮ್ಮ ಪೋಷಕರ ಜವಾಬ್ದಾರಿ ಪಾಲನೆ ಪೋಷಣೆ ಹಾಗೂ ಶ್ರಮದ ಬಗ್ಗೆ ತಿಳಿಯಬೇಕು. ಅಂದಾಗ ಮಾತ್ರ ನೀವು ಕಲಿತ ಶಾಲೆಗೆ ಮತ್ತು ನಿಮ್ಮ ಪೋಷಕರಿಗೆ ಗೌರವ ಹೆಚ್ಚಾಗಿ ಕೊಡಿಸಲು ಕಾರಣ ವಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂತಹ ಪುರಸ್ಕಾರಗಳನ್ನು ನೀಡುವುದು ವಿದ್ಯಾರ್ಥಿಗಳಿಗೆ ಪ್ರೇರಣೆ ದೊರೆತು ಇನ್ನು ಹೆಚ್ಚಿನ ಅಭ್ಯಾಸದ ಕಡೆಗೆ ಮುಖ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.

ಜಿಲ್ಲಾಧ್ಯಕ್ಷ ಮಹಿಪಾಲರಡ್ಡಿ ಮಾತನಾಡಿ, ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳ ಈ ಸಾಧನೆ ಜಿಲ್ಲೆಗೆ ಸ್ಫೂರ್ತಿಯಾಗಿದೆ. ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಕೊನೆಯ ಸ್ಥಾನದಲ್ಲಿ ಎಂಬ ಮಾತುಗಳು ಸರ್ವೇ ಸಾಮಾನ್ಯ. ಆದರೆ ಯಾದಗಿರಿ ಜಿಲ್ಲೆಯಲ್ಲಿ 65 ವಿದ್ಯಾರ್ಥಿಗಳು ಶೇ% 90ಕ್ಕಿಂತ ಹೆಚ್ಚಾಗಿ ಶ್ರೇಣಿಯನ್ನು ತೆಗೆದು ಪರೀಕ್ಷೆಗಳಲ್ಲಿ ಉತ್ತಿರ್ಣರಾಗಿದ್ದು ಇದು ಯಾದಗಿರಿ ಜಿಲ್ಲೆಗೆ ಸಾಧನೆಗೆ ಮೊದಲ ಮೆಟ್ಟಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಸಂಘದ ಖಜಾಂಚಿ ಯಾಮರಡ್ಡಿ ಮುಂಡಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಮ್.ನಾಟೆಕರ್, ಉಪಾಧ್ಯಕ್ಷ ಬಸವರಾಜ್, ಸಾಂಸ್ಕೃತಿಕ ಕಾರ್ಯದರ್ಶಿ ಗೋವಿಂದ ಮೂರ್ತಿ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ವೆಂಕಟೇಶ್.ಎಮ್. ಹಿರೇನೋರ್, ಗುರುಮಿಠಕಲ್ ತಾಲ್ಲೂಕ ಅಧ್ಯಕ್ಷ ಸಂತೋಷ ನೀರಟಗಿ, ಸುರಪುರು ತಾಲ್ಲೂಕು ಅಧ್ಯಕ್ಷ ಸಂಜು ದರ್ಬಾರಿ, ಸಂಫದ ಸದಸ್ಯರು ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.