ಹಗರಿಬೊಮ್ಮನಹಳ್ಳಿ: ಕಳೆದ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳೇ ತಾಲೂಕಿನ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಪಾರಮ್ಯ ಮೆರೆದಿದ್ದು, ಈ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಜಿಲ್ಲೆಯ ಪ್ರಥಮ ಮೂರೂ ಸ್ಥಾನಗಳನ್ನು ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೇ ಬಾಚುವಂತಾಗಬೇಕು ಎಂದು ಶಾಸಕ ನೇಮರಾಜ್ ನಾಯ್ಕ್ ಆಶಿಸಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಶಾಲಾ ದಾಖಲಾತಿ ಹಾಗೂ ಶಾಲಾ ಪ್ರಾರಂಭೋತ್ಸವ ಮತ್ತು ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಈಗಾಗಲೇ ಒಂದು ನೂರು ಕೋಟಿಗೂ ಹೆಚ್ಚು ಅನುದಾನ ಒದಗಿಸಿ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಶಾಸಕರ ಅನುದಾನದಡಿ ಸುಮಾರು ೩ ಸಾವಿರ ಮಕ್ಕಳು ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ಶಿಕ್ಷಣ ಕೆಲವೇ ಜನರಿಗೆ ಸೀಮಿತವಾಗಿದೆ. ಅಗತ್ಯ ಸೌಲಭ್ಯಗಳ ಕೊರತೆ ಸದಾ ಕಾಡುತ್ತಿತ್ತು ಆದರೆ, ಈಗ ಸರ್ಕಾರ ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಮೊಟ್ಟೆ, ಹಾಲು, ಬಾಳೆಹಣ್ಣು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಷ್ಟಪಟ್ಟು ದುಡಿದು ಶಾಲೆಗೆ ಕಳುಹಿಸುತ್ತಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕೂಡ ಮೊಬೈಲ್‌ಗಳ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕಗಳತ್ತ ಹೆಚ್ಚು ಗಮನ ಹರಿಸುವ ಮೂಲಕ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು. ಎಲ್‌ಕೆಜಿ, ಯುಕೆಜಿ ಹಾಗೂ ಪ್ರಥಮ ತರಗತಿಗೆ ದಾಖಲಾದ ಮಕ್ಕಳನ್ನು ಗಣ್ಯರು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು. ಬಳಿಕ ಮಕ್ಕಳಿಗೆ ಗೋದಿ ಹುಗ್ಗಿ ಪಾಯಸದ ಸಿಹಿ ಊಟದ ವ್ಯವಸ್ಥೆ ಮಾಡಲಾಯಿತು.
ತಹಶೀಲ್ದಾರ್ ಆರ್. ಕವಿತಾ, ತಾಪಂ ಇಒ ಪಿ.ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಜಗದೀಶ್, ಕ್ಲಸ್ಟರ್ ಬಿಆರ್‌ಸಿ ಕನಕಪ್ಪ ಮಾತನಾಡಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ತಾಲ್ಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಸಿ.ಎಚ್.ಸಿದ್ದರಾಜು, ಗೌರಜ್ಜನವರ ಬಸವರಾಜಪ್ಪ, ಬಣಕಾರ ಕೊಟ್ರೇಶ್, ಕಡ್ಡಿ ಚೆನ್ನಬಸಪ್ಪ, ಎಸ್.ವಿ.ಪಾಟೀಲ, ಕಡ್ಡಿ ಕೊಟ್ರೇಶ್, ಬಣಕಾರ ಮಲ್ಲಿಕಾರ್ಜುನ, ಸೊಬಟಿ ಹರೀಶ್, ಬಿ.ದೇವಿಪ್ರಸಾದ್, ಸಂಡೂರು ಮೆಹಬೂಬ್, ಶಾಸಕರ ಆಪ್ತ ಸಹಾಯಕ ಬ್ಯಾಟಿ ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ನೀಲಗಿರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಕುಮಾರ ನಾಯ್ಕ್, ಮುಖ್ಯ ಶಿಕ್ಷಕ ಹೆಚ್.ಎಂ.ಸಿದ್ದೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.