ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು, ಸ್ವಾವಲಂಬಿ ಜೀವನವನ್ನು ತಮ್ಮದಾಗಿಸಿಕೊಂಡಾಗ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಗಳು ಕಂಡ ಕನಸು ನನಸಾಗಲಿದೆ ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.ನಗರದ ಶ್ರೀಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿ ಪ್ರಶಸ್ತಿ ಪ್ರದಾನ, ರ್‍ಯಾಂಕ್ ವಿಜೇತರಿಗೆ ಪುರಸ್ಕಾರ, ಸ್ಫೂರ್ತಿ ಎನ್.ಎಸ್.ಎಸ್.,ಎನ್.ಸಿ.ಸಿ.,ರೆಡ್‌ಕ್ರಾಸ್ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸ್ಫೂರ್ತಿ ಕಾರ್ಯಕ್ರಮ ಮಕ್ಕಳ ಅಭಿವ್ಯಕ್ತಿಗೆ ಒಳ್ಳೆಯ ವೇದಿಕೆಯಾಗಿದೆ. ನಾನು ಪಕ್ಕದ ಕಾಲೇಜಿನಲ್ಲಿಯೇ ಒದಿದ್ದು, ಅಲ್ಲಿನ ಅಭಿವ್ಯಕ್ತಿ ವೇದಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಪರಿಣಾಮ ನಿಮ್ಮ ಮುಂದೆ ನಿಂತು ಮಾತನಾಡುವಂಥ ಆತ್ಮಸ್ಥೈರ್ಯ ಹೊಂದಲು ಸಾಧ್ಯವಾಯಿತು ಎಂದರು.ಒಂದು ವಿದ್ಯಾಸಂಸ್ಥೆಯ ತೇರು ಸುಗಮವಾಗಿ ಸಾಗಬೇಕೆಂದರೆ, ಅದರ ಚಕ್ರಗಳಾಗಿರುವ ಬೋಧಕ ಮತ್ತು ಬೋಧಕೇತರ ವರ್ಗದವರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಸಿಬ್ಬಂದಿ ವರ್ಗ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಕೇವಲ ವೇತನಕ್ಕಾಗಿ ಇಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ. ಸೇವೆಯೇ ಅವರ ಆಶಯವಾಗಿದೆ ಎಂದು ಶಿವಸಿದ್ಧೇಶ್ವರ ಸ್ವಾಮೀಜಿ ನುಡಿದರು.ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆ ಎಂಬುದು ಒಂದು ಕುಟುಂಬವಿದ್ದ ಹಾಗೆ. ಇದರ ಬೆಳವಣಿಗೆಗೆ ಅನೇಕರು ಶ್ರಮವಹಿಸಿದ್ದಾರೆ. ಅವರೆಲ್ಲರನ್ನೂ ನಾವು ಸ್ಮರಿಸಿಕೊಳ್ಳಬೇಕಾಗಿದೆ. ಮೂವತ್ತು ಲಕ್ಷ ರು.ಗಳ ದತ್ತಿ ನಿಧಿ ನಮ್ಮಲ್ಲಿದೆ. ಇದರ ಹಿಂದೆ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ಅವರ ಶ್ರಮವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ದಕ್ಷಿಣಮೂರ್ತಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ, ಐವರು ರ್‍ಯಾಂಕ್ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡು,ಇತರರಿಗೆ ಸ್ಫೂರ್ತಿಯಾಗುವಂತೆ ಮಾಡಲಾಗಿದೆ. ದತ್ತಿ ನಿಧಿಯಿಂದ ಹಲವಾರು ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ. 12 ಜನರು ಸ್ಥಾಪಿಸಿದ ಸುಮಾರು 30 ಲಕ್ಷ ರು.ಗಳ ದತ್ತಿ ನಿಧಿಯಿಂದ ಪ್ರತಿ ವಿಭಾಗದ ಟಾಪರ್ಸ್ ಗಳನ್ನು ಗುರುತಿಸಿ 30 ವಿದ್ಯಾರ್ಥಿಗಳಿಗೆ ಗೌರವಿಸಲಾಗುತ್ತಿದೆ. ಇಂತಹ ಕಾರ್ಯಕ್ರಮ ಇತರರಿಗೆ ಪ್ರೇರೇಪಣೆಯಾಗಲಿದೆ ಎಂದರು.
ಶ್ರೀಸಿದ್ಧಗಂಗಾ ಪದವಿಪೂರ್ವ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗಾಯಕರಾದ ಪಂತಾಳೆ ರಕ್ಷಿತ್, ಐಕ್ಯೂಎಸಿ ಸಂಚಾಲಕರಾದ ಶೀಲಾ ಕೆ.ಪಿ,ಸ್ಫೂರ್ತಿ ಸಂಚಾಲಕರಾದ ಪಾವನ.ಬಿ.ಎಸ್., ಸಹ ಸಂಚಾಲಕರಾದ ನಯನ.ಕೆ.ಆರ್ ಮತ್ತಿತರರು ಪಾಲ್ಗೊಂಡಿದ್ದರು.