ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿರುವ ಆಟದ ಮೈದಾನದ ಹಕ್ಕುಗಾರಿಕೆಗೆ ಸಂಬಂಧಿಸಿ ಯಾರ ಪ್ರಭಾವಕ್ಕೂ ಒಳಗಾಗದೆ ಮಹಾನಗರ ಪಾಲಿಕೆ ಆಯುಕ್ತರು ಅದನ್ನು ಪಾಲಿಕೆ ಆಸ್ತಿಯಾಗಿ ಉಳಿಸಿಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಆಟದ ಮೈದಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರಭಕ್ತರ ಬಳಗ ಈಗಾಗಲೇ ಪ್ರಮುಖ ದಾಖಲೆಗಳೊಂದಿಗೆ ಪಾಲಿಕೆ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸದರಿ ಜಾಗದ ಖಾತೆಯನ್ನು ನಿಯಮಬಾಹಿರವಾಗಿ ವಕ್ಫ್‌ಬೋರ್ಡ್ ಹೆಸರಿಗೆ ಮಾಡಿದ್ದನ್ನು ಪ್ರಶ್ನೆಮಾಡಿ, ಪುನರ್ ಪರಿಶೀಲಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆಯುಕ್ತರು, ಯಾವುದೇ ಕ್ರಮ ಕೈಗೊಳ್ಳದ ಕಾರಣ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯ ಈಗ ಎಂಟು ವಾರದೊಳಗೆ ಸದರಿ ಜಾಗದ ಬಗ್ಗೆ ದಾಖಲಾತಿಗಳನ್ನು ನೀಡಬೇಕು ಎಂದು ತಿಳಿಸಿತ್ತು. ಕೊಟ್ಟ ಅವಧಿ ಜು.17ಕ್ಕೆ ಮುಗಿದಿದೆ. ಈ ಹಿಂದೆ ಸಲ್ಲಿಸಿದ ದಾಖಲೆಗಳಲ್ಲದೆ ಮತ್ತೆ ಜು.1 ರಂದು ನಾವು ಆಯುಕ್ತರಿಗೆ ಹೆಚ್ಚುವರಿ ದಾಖಲೆಗಳನ್ನು ನೀಡಿದ್ದೆವು ಎಂದರು.
ನಾವು ನೀಡಿದ ದಾಖಲೆ ಪ್ರಕಾರ ಹಕ್ಕುಗಾರಿಕೆ ಸಾಬೀತುಪಡಿಸುವಂತಹ ದಾಖಲೆಗಳು ವಕ್ಫ್ ಮಂಡಳಿ ಬಳಿ ಇರುವುದಿಲ್ಲ. ಹಾಗಾಗಿ ಕಾನೂನುಬಾಹಿರವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸಬೇಕು ಮತ್ತು ಕಾನೂನುಬಾಹಿರವಾಗಿ ಖಾತೆ ಮಾಡಿಕೊಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಜಾಗವನ್ನು ಪಾಲಿಕೆ ಆಸ್ತಿಯನ್ನಾಗಿ ಉಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಜು.21ರಂದು ಮತ್ತೆ ದಾಖಲೆಗಳೊಂದಿಗೆ ಪಾಲಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗುವುದು. ಇದನ್ನು ಪಾಲಿಕೆ ಸ್ವತ್ತಾಗಿ ಉಳಿಸದೇ ಹೋದರೆ ಹಿಂದೂ ಸಮಾಜ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಗಳನ್ನು ಮಾಡಲಿ, ಆದರೆ ಅಭಿವೃದ್ಧಿಯನ್ನು ಕುಂಠಿತಗೊಳಿಸುವುದು ಸರಿಯಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರಸ್ತೆಗಳು ನಿರ್ಮಾಣವಾಗುವುದಿರಲಿ, ಗುಂಡಿಬಿದ್ದ ರಸ್ತೆಗಳಿಗೆ ಮಣ್ಣುಹಾಕುವ, ಗುಂಡಿ ಮುಚ್ಚುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ ಎಂದು ಟೀಕಿಸಿದರು.
ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಈ. ವಿಶ್ವಾಸ್, ಬಾಲು, ಕುಬೇರಪ್ಪ, ಸತ್ಯನಾರಾಯಣ್, ವಾಗೀಶ್, ಅ.ಮ. ಪ್ರಕಾಶ್ ಇತರರು ಇದ್ದರು.ಸಮಾವೇಶದ ನೆನಪಿಗೆ ಶಾಸಕರಿಗೆ ಒಂದು ಕೋಟಿ ರು. ನೀಡಿ
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಯಾವುದೇ ಶಾಸಕರಿಗೆ ಅನುದಾನವನ್ನೇ ನೀಡಿಲ್ಲ. ಸಾಧನಾ ಸಮಾವೇಶದ ನೆನಪಿಗಾದರೂ ಶಾಸಕರಿಗೆ ಒಂದು ಕೋಟಿ ಅನುದಾನ ನೀಡಿ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್‌ನಲ್ಲಿ ಪ್ರತಿಯೊಬ್ಬ ಶಾಸಕರಿಗೂ 50 ಕೋಟಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಆದರೆ ಇದೂವರೆಗೆ 50 ಕೋಟಿ ರು. ಇರಲಿ, 50 ಲಕ್ಷ ರು.ವನ್ನೂ ಕೊಟ್ಟಿಲ್ಲ. ಕನಿಷ್ಠ 5 ಕೋಟಿ ರು.ವನ್ನಾದರೂ ಕೊಡಬೇಕಿತ್ತು. ಆದರೆ ಅದನ್ನೂ ಕೊಟ್ಟಿಲ್ಲ. ಶಾಸಕರೆಂದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರೂ ಬರುತ್ತಾರೆ. ಯಾರಿಗೂ ಕೊಟ್ಟಿಲ್ಲ ಸುಮ್ಮನೆ ಸಾಧನಾ ಸಮಾವೇಶಗಳನ್ನು ಮಾಡುತ್ತಾರೆ. ಈ ಸಾಧನ ಸಮಾವೇಶದ ನೆನಪಿಗಾದರೂ ಎಲ್ಲಾ ಶಾಸಕರಿಗೆ ತಲಾ ೧ ಕೋಟಿ ರು. ತಕ್ಷಣ ಬಿಡುಗಡೆ ಮಾಡಲಿ ಎಂದರು.