ಸಾರಾಂಶ
ಹೊಸಪೇಟೆ: ಅಂಧರ ಬದುಕು ಹಸನುಗೊಳಿಸಲು ನಾವೆಲ್ಲರೂ ಕಟಿಬದ್ಧರಾಗಿರಬೇಕು. ದೇವರು ಅವರಿಗೆ ದಿವ್ಯದೃಷ್ಟಿ ಕೊಟ್ಟಿದ್ದು, ನಾವು ಸಹಕಾರ ನೀಡಿದರೆ ಅವರ ಸಾಧನೆ ಹಾದಿ ಸುಗಮಗೊಳ್ಳಲಿದೆ ಎಂದು ಚಿತ್ರನಟ ಟೆನ್ನಿಸ್ ಕೃಷ್ಣ ಹೇಳಿದರು.
ಸೇವಿಯರ್ ಅಂಗವಿಕಲ ಸೇವಾ ಸಮಿತಿಯಿಂದ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಕ್‌ಥಾನ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.ಅಂಗವಿಕಲರು ಹಾಗೂ ಅಂಧರಲ್ಲಿ ಪ್ರತಿಭೆ ಇದೆ. ನಾವು ಅವರಿಗೆ ಅವಕಾಶದ ಜೊತೆಗೆ ವೇದಿಕೆ ನಿರ್ಮಿಸಿಕೊಡಬೇಕು. ಬ್ರೈಲ್ ಲಿಪಿಯಲ್ಲಿ ಶಿಕ್ಷಣ ಕೂಡ ಪಡೆಯುತ್ತಿದ್ದಾರೆ. ಅವರಲ್ಲಿ ಉತ್ಸಾಹ ತುಂಬಲು ನಾವು ವಾಕ್ ಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಆಯೋಜನೆ ಆಗಬೇಕು ಎಂದರು.ಸಂಸದ ಈ. ತುಕಾರಾಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವಿಲಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸದಾ ಸಿದ್ಧರಿದ್ದೇವೆ. ಸರ್ಕಾರದ ಯೋಜನೆಗಳನ್ನು ಅಂಧರು ಸೇರಿದಂತೆ ಅಂಗವಿಕಲರಿಗೆ ತಲುಪಿಸಲಾಗುವುದು. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಇರುವ ಎಲ್ಲ ಅಂಗವಿಕಲರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನಾಗಿಸಲಾಗುವುದು. ಅಖಂಡ ಬಳ್ಳಾರಿ ಜಿಲ್ಲೆ ರಾಜಕೀಯ ಶಕ್ತಿಯೂ ಆಗಿದೆ. ಈ ಅವಳಿ ಜಿಲ್ಲೆಗಳಿಂದ ಹೆಚ್ಚು ಶಾಸಕರು ಯಾರಿರುತ್ತಾರೋ ಯಾವಾಗಲೂ ಅವರದೇ ಸರ್ಕಾರ ರಚನೆ ಆಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಶಾಸಕಿ ಅನ್ನಪೂರ್ಣಾ ಮಾತನಾಡಿ, ಅಂಗವಿಕಲರು ಆಯೋಜಿಸುವ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುವುದು. ನಾವು ಸದಾ ಮಾನವೀಯತೆ ಮೆರೆಯಬೇಕು. ಮೊದಲಿನಿಂದಲೂ ನಾವು ಸಮಾಜ ಸೇವೆ ಕಾರ್ಯ ಮಾಡುತ್ತ ಬಂದಿದ್ದೇವೆ. ಇದನ್ನು ಮುಂದುವರೆಸುತ್ತೇವೆ ಎಂದರು.ಚಿತ್ರ ನಿರ್ಮಾಪಕ ಭಾಮಾ ಹರೀಶ್, ಹುಡಾ ಅಧ್ಯಕ್ಷ ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಅವಿನಾಶ್, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತಾ, ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಈಶ್ವರ, ಸೇವಿಯರ್ ಅಂಗವಿಕಲ ಸೇವಾ ಸಮಿತಿಯ ಅಧ್ಯಕ್ಷೆ ಹನುಮಂತಮ್ಮ, ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಸಂತೋಷ್, ಬಿಡಿಸಿಸಿ ಬ್ಯಾಂಕ್‌ನ ತಿಮ್ಮಾರೆಡ್ಡಿ, ಮುಖಂಡರಾದ ಜಗದೀಶ್, ದ್ವಾರಕೀಶ್ ಮತ್ತಿತರರಿದ್ದರು.
ಅಂಗವಿಕಲರು ವಾಕ್‌ಥಾನ್‌ನಲ್ಲಿ ಪಾಲ್ಗೊಂಡಿದ್ದರು. ಮಲ್ಲಕಂಬ ಹಾಗೂ ಯೋಗಾಸನದ ಪ್ರದರ್ಶನ ನೀಡಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡವರಿಗೆ ಬಳ್ಳಾರಿ ಸಂಸದ ಈ. ತುಕಾರಾಂ ಬಹುಮಾನ ವಿತರಿಸಿದರು.ಹೊಸಪೇಟೆಯಲ್ಲಿ ನಡೆದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಕ್‌ಥಾನ್ ಕಾರ್ಯಕ್ರಮದಲ್ಲಿ ಮಲ್ಲಕಂಬ ಪ್ರದರ್ಶನ ನೀಡಿದ ಅಂಧಪಟುಗಳಿಗೆ ಚಿತ್ರ ನಟ ಟೆನ್ನಿಸ್ ಕೃಷ್ಣ, ಸಂಸದ ಈ. ತುಕಾರಾಂ ಬಹುಮಾನ ವಿತರಿಸಿದರು.