ಸಾರಾಂಶ
ಪ್ರತಿ ಅಭ್ಯರ್ಥಿಗೆ ₹ 95 ಲಕ್ಷ ವರೆಗೆ ಖರ್ಚು ಮಾಡುವ ಅವಕಾಶವಿದೆ. ವಾಹನ, ಪ್ರಚಾರ ಸಾಮಗ್ರಿ, ವೇದಿಕೆ ಸಾಮಗ್ರಿ, ಧ್ವನಿವರ್ಧಕ ಹೀಗೆ ಪ್ರತಿಯೊಂದರ ದರವನ್ನು ಆಯೋಗದ ಮಾರ್ಗಸೂಚಿಗಳ ಪ್ರಕಾರ ನಿಗದಿಪಡಿಸಿ ಗೆಜೆಟ್ ಹೊರಡಿಸಲಾಗಿರುತ್ತದೆ.
ಧಾರವಾಡ:
ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಚುನಾವಣೆ ಯಶಸ್ವಿಯಾಗಿ ಸಂಘಟಿಸಲು ಸಹಕರಿಸಬೇಕು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.ಚುನಾವಣಾ ಕಾರ್ಯಾಲಯದ ಸಭಾಭವನದಲ್ಲಿ ಮಂಗಳವಾರ ನಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳ ಏಜೆಂಟ್‌ರ ಸಭೆ ಜರುಗಿಸಿದ ಅವರು, ಚುನಾವಣಾ ಆಯೋಗದ ನಿಯಮಾವಳಿಗಳ ಪುಸ್ತಕ, ಇವಿಎಂ ಬಗ್ಗೆ, ಮತದಾರರ ಪಟ್ಟಿ ಮತ್ತು ಚುನಾವಣೆಯಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಕೈಪಿಡಿ ನೀಡಲಾಗಿದೆ. ಅದನ್ನು ಓದಿ ತಿಳಿದುಕೊಳ್ಳಬೇಕು. ಯಾವುದೇ ಗೊಂದಲ ಅಥವಾ ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಚುನಾವಣಾ ಸಹಾಯವಾಣಿ 1950ಕ್ಕೆ ಕರೆ ಮಾಡಿ ಪಡೆಯಬಹುದು ಎಂದರು.
ಪ್ರತಿ ಅಭ್ಯರ್ಥಿಗೆ ₹ 95 ಲಕ್ಷ ವರೆಗೆ ಖರ್ಚು ಮಾಡುವ ಅವಕಾಶವಿದೆ. ವಾಹನ, ಪ್ರಚಾರ ಸಾಮಗ್ರಿ, ವೇದಿಕೆ ಸಾಮಗ್ರಿ, ಧ್ವನಿವರ್ಧಕ ಹೀಗೆ ಪ್ರತಿಯೊಂದರ ದರವನ್ನು ಆಯೋಗದ ಮಾರ್ಗಸೂಚಿಗಳ ಪ್ರಕಾರ ನಿಗದಿಪಡಿಸಿ ಗೆಜೆಟ್ ಹೊರಡಿಸಲಾಗಿರುತ್ತದೆ. ಅದರಂತೆ ಎಲ್ಲರೂ ಖರ್ಚು ವೆಚ್ಚದ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಮನೆಯಿಂದ ಮತದಾನಕ್ಕಾಗಿ ಈಗಾಗಲೇ ನೋಂದಾಯಿತರಾಗಿರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಶೇ. 40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವಿಕಲಚೇತನರಿಗೆ ಏ. 25 ಮತ್ತು 26ರಂದು ಮನೆಯಿಂದ ಮತದಾನ ಮಾಡಲು ಅವಕಾಶವಿದೆ. ಇದಕ್ಕೆ ಬೇಕಿರುವ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.ಈಗಾಗಲೇ ಮನೆ-ಮನೆಗೆ ಮತದಾರರ ವೋಟರ್ ಸ್ಲಿಪ್ ವಿತರಣೆ ಕಾರ್ಯ ಆರಂಭವಾಗಿದೆ. ಇದರೊಂದಿಗೆ ವೋಟರ್ ಗೈಡ್ ಮತ್ತು ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ, ಯುವತಿಯರಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಪ್ರಶಂಸನಾ ಪತ್ರ ನೀಡಲಾಗುತ್ತಿದೆ. ಪೂರಕ ಮತದಾರರ ಪಟ್ಟಿ ಬಂದಿದ್ದು, ವಿತರಿಸಲಾಗಿದೆ ಎಂದರು.
ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸಿದ್ದು ಹುಲ್ಲೋಳಿ ಪ್ರಾತ್ಯಕ್ಷಿಕೆ ಮೂಲಕ ಚುನಾವಣಾ ನಿಯಮ ಹಾಗೂ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮ ವಿವರಿಸಿದರು. ವೆಚ್ಚ ನೋಡಲ್ ಅಧಿಕಾರಿ ವಿಶ್ವನಾಥ ಅಭ್ಯರ್ಥಿಗಳ ಖರ್ಚು, ವೆಚ್ಚ, ನಿರ್ವಹಿಸುವ ವಹಿಗಳು, ದಾಖಲೆಗಳು, ವೆಚ್ಚ ವಿವರದ ನಮೂನೆಗಳ ಕುರಿತು ಅಭ್ಯರ್ಥಿಗಳಿಗೆ ವಿವರಿಸಿದರು. ಚುನಾವಣಾ ಸಾಮಾನ್ಯ ವೀಕ್ಷಕರಾದ ಅಜಯ ಗುಪ್ತಾ, ಪೊಲೀಸ್ ವೀಕ್ಷಕರಾದ ಭನ್ವರ ಲಾಲ ಮೀನಾ, ವೆಚ್ಚ ವೀಕ್ಷಕರಾದ ಭೂಷಣ ಪಾಟೀಲ, ಜಿಪಂ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ ಇದ್ದರು.