ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡ ಮತೀಯ ಸೂಕ್ಷ್ಮ ಎಂಬ ಹಣೆಪಟ್ಟಿ ಹೋಗಬೇಕು. ಅಪಪ್ರಚಾರವನ್ನು ಮೆಟ್ಟಿ ನಿಂತು, ಜನರು ಸತ್ಯ- ಧರ್ಮವನ್ನು ಗೆಲ್ಲಿಸಬೇಕಿದೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆಲುವಿನ ಮೂಲಕ ಜನತೆಯ ಅಭಿವೃದ್ಧಿಯ ಕನಸಿಗೆ ಚೈತನ್ಯ ಸಿಗಬೇಕು. ನನ್ನ ಶಿಷ್ಯನ ಗೆಲವು ಕಣ್ಣಾರೆ ನೋಡಬೇಕು ಎಂದು ಹಿರಿಯ ಕಾಂಗ್ರೆಸಿಗ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.ಈ ಲೋಕಸಭಾ ಚುನಾವಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರಗಳು, ಬೀಚ್, ಪಶ್ಚಿಮಘಟ್ಟ ಇತ್ಯಾದಿ ಪ್ರವಾಸೋದ್ಯಮದ ನೈಸರ್ಗಿಕ ಸೌಂದರ್ಯದ ದ.ಕ. ಜಿಲ್ಲೆ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ, ಜನರು ಅಭಿವೃದ್ಧಿಗಾಗಿ ಬೆಂಬಲಿಸಬೇಕು ಎಂದು ಹೇಳಿದರು.
ತುಳುನಾಡು ದೈವ- ದೇವರ ನಾಡಾಗಿದ್ದು, ಸತ್ಯ, ಧರ್ಮ, ನಿಷ್ಠೆಯೇ ಈ ನೆಲದ ಅಸ್ಮಿತೆ. ದೇವರು- ದೇವಾಲಯಗಳನ್ನೊಂಡ ಈ ನಾಡಿನಲ್ಲಿ ಪರಸ್ಪರ ದ್ವೇಷ, ಅಧರ್ಮ ಸಲ್ಲದು. ಸತ್ಯ, ಧರ್ಮ, ಸೌಹಾರ್ದತೆಯ ಗೆಲುವಾಗಬೇಕು ಎಂದು ಹೇಳಿದ ಜನಾರ್ದನ ಪೂಜಾರಿ, ಹಿಂದು ಅಂದರೆ ಮಾನವೀಯತೆಯ ಧರ್ಮ. ಮಾನವೀಯತೆಗಿಂತಲೂ ಮಿಗಿಲಾದ ಧರ್ಮವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಇದನ್ನು ಚೆನ್ನಾಗಿ ಪಾಲನೆ ಮಾಡುತ್ತಿದ್ದಾರೆ ಎಂದರು.ದ.ಕ. ಜಿಲ್ಲೆಗೆ ಬಂದರು, ವಿಮಾನಯಾನ, ರೈಲು, ರಸ್ತೆ ಸಾರಿಗೆ ನೀಡಿದ್ದು ಕೇಂದ್ರದ ಕಾಂಗ್ರೆಸ್ ಸರ್ಕಾರ. ಭೂಮಸೂದೆ ಜಾರಿ ಮೂಲಕ ನಾಡಿನ ಶೇ.80ರಷ್ಟು ಮಂದಿ ಭೂಮಿಯ ಒಡೆಯರಾದರು. 70 ವರ್ಷಗಳಲ್ಲಿ ಏನಾಗಿದೆ ಕೇಳುವವರು ಕಳೆದ 33 ವರ್ಷಗಳಲ್ಲಿ ಜನರಿಗೆ ಏನಾದರೂ ಕೊಡುಗೆ ಸಿಕ್ಕಿದ್ದರೆ ಹೇಳಲಿ ಎಂದರು.
ಮೋದಿ ಅಲೆ ಎನ್ನುವಂಥದ್ದು ಭ್ರಮೆ. 10 ವರ್ಷಗಳ ಹಿಂದೆ ನೀಡಿದ ಭರವಸೆಗಳಲ್ಲಿ ಒಂದೂ ಈಡೇರಿಸಿಲ್ಲ. ನನ್ನ ಸಾಲ ಮೇಳದಂತಹ ಒಂದು ಯೋಜನೆ ಮೋದಿ ಕೊಟ್ಟಿದ್ದಾರಾ? ಅಭಿವೃದ್ಧಿ ಅಂದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾವಲ್ಲ, ಜನಸಾಮಾನ್ಯರ ಸಂಕಷ್ಟ ಸ್ಪಂದಿಸುವಂತಾಗಬೇಕು ಎಂದರು.ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸ ಆಗಬೇಕಿದೆ. ಯುವ ಸಮುದಾಯಕ್ಕೆ ಕೆಲಸ ನೀಡಿ ಮುನ್ನಡೆಸುವ ಕೆಲಸ ಮಾಡಬೇಕು. ನಾರಾಯಣ ಗುರುಗಳು, ವಿವೇಕಾನಂದರ ತತ್ವ ಚಿಂತನೆಯನ್ನು ಇಂದಿನ ಯುವ ಸಮಾಜ ಅರ್ಥೈಸಿಕೊಳ್ಳಬೇಕು ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.