ಯುವ ಪೀಳಿಗೆಗೆ ಭಜನೆಯ ಬಗ್ಗೆ ಅರಿವು ಮೂಡಿಸಿ

| Published : Jan 21 2025, 12:35 AM IST

ಸಾರಾಂಶ

ಜಿಲ್ಲಾ ಮಟ್ಟದ ಭಜನಾ ಮೇಳವನ್ನು ಹಿರಿಯ ಭಜನಾ ಕಲಾವಿದ ಮಂಗಲದ ನಂಜುಂಡಸ್ವಾಮಿ ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿದರು. ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿಗಳು, ಆಲೂರು ಬಸವರಾಜು, ಮಾದಲಾಂಬಿಕೆ, ವಸಂತಮ್ಮ, ಸಿದ್ದಮಲ್ಲಪ್ಪ, ಗೌರಿಶಂಕರ್, ಮುದ್ದುಬಸವಣ್ಣ ಮುಂತಾದವರು ಇದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಭಜನೆ ಮನುಷ್ಯನ ಅಂತರಂಗವನ್ನು ಶುದ್ಧ ಮಾಡುವುದರ ಜೊತೆಗೆ ಸುಸಂಸ್ಕೃತ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮರಿಯಾಲ ಮಠದಲ್ಲಿ ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಭಜನಾ ಮೇಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವ್ಯಕ್ತಿ ತನ್ನ ಪ್ರೀತಿ, ನಂಬಿಕೆ, ಪೂಜ್ಯ ಭಾವನೆಗಳನ್ನು ವ್ಯಕ್ತ ಪಡಿಸಲು ಮತ್ತು ದೈವಿಕತೆಗೆ ಶರಣಾಗಲು ಅನುಸರಿಸುವ ಆರಾಧನೆಯ ಒಂದು ಭಾಗವಾಗಿ ಭಜನೆಗಳು ರಚನೆಯಾಗಿವೆ. ಮನುಷ್ಯ ಮನಃ ಪೂರ್ವಕವಾಗಿ ದೇವರಿಗೆ ನೀಡುವಂತಹ ಸಂಪತ್ತು ಇದ್ದರೆ ಅದು ಭಜನೆ. ಭಜನೆಯನ್ನು ಭಕ್ತಿ ಪೂರ್ವಕವಾಗಿ ಅರ್ಪಿಸಿದರೆ ಪರಮಾತ್ಮನಿಗೆ ಅದಕ್ಕಿಂತ ದೊಡ್ಡ ಹರಕೆ ಇಲ್ಲ ಎಂದು ತಿಳಿಸಿದರು.

ಭಜನೆ ಎಂಬ ಮೂರಕ್ಷರವು ಬಹಳ ಮಹತ್ವದಾಗಿದ್ದು ಅದು ವಿಭಜನೆ ತಡೆಗಟ್ಟುವ ಮೂಲವಾಗಿರುವುದರ ಜೊತೆಗೆ ವ್ಯಕ್ತಿಯ ಹಲವಾರು ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮವಾಗಿದೆ ಎಂದು ತಿಳಿಸಿದರು. ಇಂತಹ ಭಜನೆಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಹಿರಿಯ ಭಜನೆ ಕಲಾವಿದ ಮಂಗಲದ ನಂಜುಂಡಸ್ವಾಮಿ ಅವರು ಭಜನೆಗಳ ಮೂಲಕ ವಚನ ಸಾಹಿತ್ಯ ಪ್ರಸಾರ ಮಾಡುವುದರ ಜೊತೆಗೆ, ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.

ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಆಲೂರು ಬಸವರಾಜು ಮಾತನಾಡಿ, ದೇವರನ್ನು ತಲುಪುವ ಹಲವು ಮಾರ್ಗಗಳಲ್ಲಿ ಭಕ್ತಿಮಾರ್ಗ ಉತ್ತಮವಾದುದು, ಅಂತಹ ಜೀವನ ಮಾರ್ಗದಲ್ಲಿ ಭಜನೆಗಳು ವ್ಯಕ್ತಿಗೆ ದಾರಿತೋರುವ ಕೈದೀವಿಗೆಯಾಗಿವೆ ಎಂದರು. ಚಾಮರಾಜೇಶ್ವರಿ ಅಕ್ಕನ ಬಳಗದ ಅಧ್ಯಕ್ಷೆ ಮಾದಲಾಂಬಿಕೆ ನಂಜುಂಡಸ್ವಾಮಿ ಮಾತನಾಡಿ, ಭಜನೆಗಳು ಅಧ್ಯಾತ್ಮದ ಭಾವಗೀತೆಗಳಾಗಿದ್ದು ಜನರ ಧಾರ್ಮಿಕ ಮತ್ತು ಮಾನಸಿಕ ನೆಮ್ಮದಿಯನ್ನು ಉತ್ತಮ ಪಡಿಸುವ ಸಾಧನವಾಗಿವೆ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಎಚ್.ಎಂ ವೀರೇಶ್ವರ ಸಮಾರೋಪ ಭಾಷಣ ಮಾಡಿ, ಭಜನೆ ಕಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಚಾಮರಾಜನಗರ ವಿರಕ್ತ ಮಠದ ಚನ್ನಬಸವಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ಪತ್ತಿನ ಸಹಕಾರ ಸಂಘದ ಎಂ. ಗೌರಿಶಂಕರ್, ಸಂಗಮ ಗೃಹ ನಿರ್ಮಾಣ ಸಂಘದ ಮುದ್ದುಬಸವಣ್ಣ. ತಾಲೂಕು ಘಟಕಗಳ ಅಧ್ಯಕ್ಷರಾದ ಕೊಳ್ಳೇಗಾಲದ ಮಲ್ಲೇಶಪ್ಪ, ಗುಂಡ್ಲುಪೇಟೆಯ ಶಿವಬಸವಮೂರ್ತಿ, ಯಳಂದೂರಿನ ನಂಜುಂಡಸ್ವಾಮಿ, ಮಹಾಮನೆ ಬಳಗದ ಪದಾಧಿಕಾರಿಗಳು, ಮುರುಘ ರಾಜೇಂದ್ರ ವಿದ್ಯಾಸಂಸ್ಥೆಯ ಎಲ್ಲ ನೌಕರರು ಹಾಜರಿದ್ದರು.

ತೀರ್ಪುಗಾರರಾಗಿ ಪಂಚಾಕ್ಷರಿಸ್ವಾಮಿ, ಮಹಾದೇವಪ್ಪ, ಬಸವರಾಜು ಕಾರ್ಯ ನಿರ್ವಹಿಸಿದರು. ಉಡಿಗಾಲ ಶಶಿಧರ್, ರಾಮಸಮುದ್ರ ಶಿವಕುಮಾರಸ್ವಾಮಿ, ದೊಡ್ಡರಾಯಪೇಟೆ ನಾಗರಾಜು ನಿರ್ವಹಣೆ ಮಾಡಿದರು. ಭ ಗವಹಿಸಿದ ಎಲ್ಲ ಭಜನೆ ತಂಡಗಳಿಗೂ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ವಿಜೇತ ತಂಡಗಳು:

ಪುರುಷರ ವಿಭಾಗದಲ್ಲಿ ಬೆಟ್ಟದ ಮಾದಹಳ್ಳಿಯ ಬಸವೇಶ್ವರ ಭಜನಾ ಸಂಘ (ಪ್ರಥಮ), ಉಡಿಗಾಲದ ಗುರುಮಲ್ಲೇಶ್ವರ ಭಜನಾ ಸಂಘ (ದ್ವಿತೀಯ), ಬಾಣಹಳ್ಳಿಯ ಗುರುಮಲ್ಲೆಶ್ವರ ಭಜನಾ ಸಂಘ (ತೃತೀಯ), ಚಿಕ್ಕಹುಂಡಿ ಬಸವೇಶ್ವರ ಭಜನೆ ಸಂಘ ಮತ್ತು ಮೂಡ್ನಕೂಡು ಕಲ್ಯಾಣ ಬಸವೇಶ್ವರ ಭಜನೆ ಸಂಘ (ಸಮಾಧಾನಕರ) ಬಹುಮಾನ ಪಡೆದರು.ಮಹಿಳಾ ವಿಭಾಗ:

ಶರಣೆ ನೀಲಾಂಬಿಕೆ ಭಜನಾ ಸಂಘ ಉಡಿಗಾಲ (ಪ್ರಥಮ), ಅಕ್ಕಮಹಾದೇವಿ ಭಜನೆ ಸಂಘ ಆಲೂರು (ದ್ವಿತೀಯ), ಸಿದ್ದಮಲ್ಲೇಶ್ವರ ಭಜನಾ ಸಂಘ ಚಾಮರಾಜನಗರ (ತೃತೀಯ) ಯಳಂದೂರು ಕದಳಿ ಮಹಿಳಾ ವೇದಿಕೆ (ಸಮಾಧಾನಕರ) ಬಹುಮಾನ ಗಳಿಸಿದರು.