ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಯುವಕರು ದಾರಿ ತಪ್ಪುತ್ತಿದ್ದಾರೆ. ಉಪನ್ಯಾಸಕರು ಮಾರ್ಗದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳಸಿ ಅಧ್ಯಯನದಲ್ಲಿ ತೊಡಗುವಂತೆ ಮಾಡಬೇಕು ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು, ಚಾಣಕ್ಯ ಕರಿಯರ ಅಕಾಡಮಿಯ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಹೇಳಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಇತಿಹಾಸ, ಭೂಗೋಳಶಾಸ್ತ್ರ ವಿಷಯಗಳ ಪ್ರಚಾರ್ಯರ, ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ನಡೆದ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಇತಿಹಾಸ, ಭೂಗೋಳಶಾಸ್ತ್ರ ವಿಷಯ ಉಪನ್ಯಾಸಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ದುಶ್ಚಟಗಳಿಂದಾಗುವ ದುಷ್ಪರಿಣಾಮ ತಿಳಿಸಿಕೊಡಬೇಕು. ಸಾಮಾಜಿಕ ಜಾಲತಾಣದ ದುರ್ಬಳಕೆ ತಡೆಯಬೇಕು ಎಂದರು.ಬೋಧನಾ ವಿಷಯ ನಮಗೆ ಹಳೆಯದಾಗಿರುತ್ತದೆ. ಆದರೆ, ವಿದ್ಯಾರ್ಥಿಗಳಿಗೆ ಹೊಸದು ಎಂಬುವುದನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಪಾಠದ ಕಡೆಗೆ ಆಕರ್ಷಿತರಾಗುವಂತೆ ಉತ್ಸಾಹದಿಂದ ಬೋಧನೆಯಲ್ಲಿ ತೊಡಗಿಕೊಳ್ಳಬೇಕು. ಕಲಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಕಲಿತ ವಿಷಯವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಅಧ್ಯಯನದಲ್ಲಿ ಅನುಸರಿಸಬೇಕಾದ ವಿಧಾನವನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯ ಎಲ್.ಆರ್.ಲಹಳ್ಳದಮನಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಉಪನ್ಯಾಸಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪ್ರತಿದಿನ ಪೂರ್ವ ಸಿದ್ಧತೆ ಮಾಡಿಕೊಂಡು ತರಗತಿಗೆ ಹೋಗಬೇಕು. ನಮ್ಮ ಬೋಧನಾ ಶೈಲಿ ಹಾಗೂ ವಿದ್ಯಾರ್ಥಿಗಳೊಂದಿಗೆ ಹೊಂದಿದ ಒಡನಾಟ ಶಾಶ್ವತವಾಗಿ ನೆನಪು ಉಳಿಯುವಂತೆ ಕರ್ತವ್ಯ ನಿರ್ವಹಿಸಬೇಕು. ಮಕ್ಕಳ ಮನಸ್ಸನ್ನು ಅರಿತುಕೊಂಡು ಪರಿಣಾಮಕಾರಿಯಾಗಿ ಬೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.ಬಿ.ಬಿ.ಗಂಗನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತಿಹಾಸ ವಿಷಯ ಜೀವನದಲ್ಲಿ ಹೆಚ್ಚು ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ನಿಟ್ಟಿನಲ್ಲಿ ಇಂದಿನಿಂದಲೇ ಸಿದ್ಧತೆಯಲ್ಲಿ ತೊಡಗಿಕೊಳ್ಳಬೇಕು. ಬದಲಾದ ಪರೀಕ್ಷಾ ವಿಧಾನ ಗಮನದಲ್ಲಿಟ್ಟುಕೊಂಡು ಕಿರುಪರೀಕ್ಷೆ, ವಿಷಯಾಧಾರಿತ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಬೇಕು ಎಂದರು.ಭೂಗೋಳಶಾಸ್ತ್ರ ವಿಷಯ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಪಟ್ಟಣದ, ಇತಿಹಾಸ ವಿಷಯ ವೇದಿಕೆ ಕಾರ್ಯದರ್ಶಿ ಎಸ್.ಡಿ.ಮದರಿ ಇದ್ದರು.ಭೂಗೋಳಶಾಸ್ತ್ರ ವಿಷಯ ವೇದಿಕೆ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಷಯ ವೇದಿಕೆ ಅಧ್ಯಕ್ಷ ಎಸ್.ಬಿ.ಪವಾರ ಸ್ವಾಗತಿಸಿದರು. ಎಸ್.ಜಿ.ಕುಂಬಾರ, ಆರ್.ಸಿ.ಹಿರೇಮಠ ನಿರೂಪಿಸಿದರು. ಪಿ.ಎಲ್.ಲಮಾಣಿ ವಂದಿಸಿದರು. ಕಾರ್ಯಾಗಾರದಲ್ಲಿ ಉಪನ್ಯಾಸಕರಾದ ಸುರೇಶ ಗಬ್ಬೂರ, ಬಿ.ಬಿ.ಚನಗೊಂಡ, ಪ್ರಭು ಪಾಟೀಲ, ಆರ್.ಸಿ.ಹಿರೇಮಠ, ಎಚ್.ಬಿ.ಪೂಜಾರಿ ಸಂಪನ್ಮೂಲಗಳಾಗಿ ಭಾಗವಹಿಸಿದ್ದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸ, ಭೂಗೋಳ ವಿಷಯದ ಹೆಚ್ಚು ಪ್ರಶ್ನೆಗಳಿರುತ್ತವೆ. ಉಪನ್ಯಾಸಕರು ಹೊಸ, ಹೊಸ ದೃಷ್ಟಿಕೋನ ಇಟ್ಟುಕೊಂಡು ಬೋಧನೆ ಮಾಡಬೇಕು. ಉಪನ್ಯಾಸಕರು ತಾವು ಕಲಿಸುವ ವಿಷಯಗಳ ಬಗ್ಗೆ ಸಮಗ್ರ ಜ್ಞಾನ ಹೊಂದಿರಬೇಕು. ನಿರಂತರ ಅಧ್ಯಯನವಿರಬೇಕು. ಅವಲೋಕನ, ಹೊಲಿಕೆ, ಕೌಶಲ್ಯ ಸೇರಿದಂತೆ ವಿವಿಧ ವಿಧಾನಗಳನ್ನು ಬೋಧನೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಪರಿಣಾಮಕಾರಿಯಾದ ಬೋಧನೆಯಾಗಲಿದೆ.
-ಎನ್.ಎಂ.ಬಿರಾದಾರ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು.