ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರದ ನೀರನ್ನು ಬಳಸುವವರೆಲ್ಲರೂ ಅಣೆಕಟ್ಟೆ ನಿರ್ಮಾಣದ ಇತಿಹಾಸವನ್ನು ತಿಳಿದುಕೊಂಡಿರಬೇಕು. ಜಲಸಂಕಷ್ಟದ ಬಗ್ಗೆ ಇಂದಿನ ಪೀಳಿಗೆಯವರಿಗೆ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನಮ್ಮ ಪೀಳಿಗೆ ನೀರಿಗಾಗಿ ಯುದ್ಧ ಮಾಡಿದರೂ ಅಚ್ಚರಿ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದರು.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಗಣಂಗೂರು ನಂಜೇಗೌಡ ರಚನೆಯ ಕೆಆರ್‌ಎಸ್ ಕಥನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಸ್ವಾಮಿನಾಥನ್ ವರದಿಯಲ್ಲಿದೆ ಪರಿಹಾರ:ಕೃಷ್ಣರಾಜಸಾಗರದ ನಿರ್ಮಾಣ, ಅದರ ಮಹತ್ವದ ಬಗ್ಗೆ ಅತ್ಯುತ್ತಮವಾದ ಅಂಶಗಳನ್ನು ಸಾಹಿತಿ ನಂಜೇಗೌಡ ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸರ್ಕಾರಗಳು ನೀರಾವರಿಗಾಗಿ ಹಲವು ಯೋಜನೆಗಳನ್ನು ರೂಪಿಸುತ್ತಾರೆ. ಆದರೆ, ಅವುಗಳು ಅನುಷ್ಠಾನವಾಗುವುದಿಲ್ಲ. ಸ್ವಾಮಿನಾಥನ್ ವರದಿ ನೀಡಿ ಹಲವು ವರ್ಷಗಳಾದರೂ ಅವು ಈವರೆಗೂ ಅನುಷ್ಠಾನವಾಗಿಲ್ಲ. ಆ ವರದಿಯ ಬಗ್ಗೆ ನನಗೆ ಅರಿವಿದ್ದು, ಸ್ವಾಮಿನಾಥನ್ ನೀರಿನ ಸಮಸ್ಯೆ ನಿವಾರಣೆಗೆ ಹಲವು ಮಾರ್ಗಗಳನ್ನು ವರದಿಯಲ್ಲಿ ದಾಖಲಿಸಿದ್ದಾರೆ. ಅದನ್ನು ಬಹುಬೇಗ ಅನುಷ್ಠಾನಗೊಳಿಸಿದರೆ ರಾಜ್ಯದಲ್ಲಿ ನದಿ ನೀರಿನ ಸಮಸ್ಯೆಗಳು ಕೊಂಚ ಬಗೆಹರಿಯುತ್ತವೆ ಎಂದು ಸಲಹೆ ನೀಡಿದರು.
ಆತಂಕಕಾರಿ ವಿಚಾರ:ಬೆಂಗಳೂರಿನ ಕೆಲ ಖಾಸಗಿ ಶಾಲೆಗಳಲ್ಲಿ ಮಾತೃಭಾಷೆ ಬಳಸುವ ವಿದ್ಯಾರ್ಥಿಗಳ ವಿರುದ್ಧ ದಂಡಾಸ್ತ್ರ ಪ್ರಯೋಗ ನಡೆಯುತ್ತಿರುವುದು ಆತಂಕಕಾರಿ ವಿಚಾರ. ಇದರ ವಿರುದ್ಧ ಸರ್ಕಾರಗಳು ಮೂರು ಸಾವಿರ ಕಾನೂನು ಕ್ರಮ ತಂದರೂ ಏನೂ ಪ್ರಯೋಜನವಿಲ್ಲ. ಬದಲಾಗಿ ಖಾಸಗಿ ಶಾಲೆಗಳ ಮುಖ್ಯಸ್ಥರೇ ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆಯನ್ನು ಕಡ್ಡಾಯವಾಗಿ ಬಳಕೆ ಮಾಡುವಂತಾಗಬೇಕು ಎಂದು ಹೇಳಿದರು.
ನಾಗರಿಕ ಸಮಾಜ ಸ್ವಯಂ ಪ್ರೇರಿತವಾಗಿ ಕನ್ನಡ ಉಳಿಸಲು ಮುಂದಾಗಿಲ್ಲವೆಂದರೆ ನಮ್ಮ ಭಾಷೆ ನಮ್ಮ ರಾಜ್ಯದಲ್ಲಿ ಬೆಳೆಯಲು ಆಗುವುದಿಲ್ಲ . ಪ್ರತಿಯೊಬ್ಬ ಮನುಷ್ಯನಿಗೂ ಚರಿತ್ರೆಯ ಬಗ್ಗೆ ಸ್ಥೂಲವಾದ ಅರಿವಿರಬೇಕು. ಪ್ರಸ್ತುತ ಸಂದರ್ಭದಲ್ಲಿ ಒಂದು ಗ್ರಾಮ ಅಥವಾ ಒಂದು ಪ್ರದೇಶದ ಹೆಸರುಗಳನ್ನು ಆಳುವವರು ಮನಬಂದಂತೆ ಬದಲಿಸುತ್ತಾರೆ. ಒಂದು ಪ್ರದೇಶಕ್ಕೆ ಪೂರ್ವಿಕರು ಒಂದು ಹೆಸರಿಟ್ಟಿದ್ದರೆ ಅದಕ್ಕೆ ತನ್ನದೇ ಆದ ಇತಿಹಾಸವಿರುತ್ತದೆ. ಅಲ್ಲೊಂದು ನೀರು ಹರಿದರೆ ಅಥವಾ ಹರಿಯದಿದ್ದರೆ ಅದಕ್ಕೊಂದು ಹೆಸರು ಸೃಷ್ಟಿಯಾಗಿರುತ್ತದೆ. ಅದೇ ರೀತಿ ಒಂದು ಸಮುದಾಯ ಅಥವಾ ಆ ಪ್ರದೇಶದ ಪ್ರಖ್ಯಾತನ ಹೆಸರನ್ನು ಆ ಗ್ರಾಮಕ್ಕೆ ಇಟ್ಟಿರುವ ಇತಿಹಾಸವಿರುತ್ತದೆ. ಆದರೆ, ಇತ್ತೀಚೆಗೆ ಆ ಹೆಸರುಗಳನ್ನು ಬದಲಾವಣೆ ಮಾಡುವ ಕೆಲಸಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಕೆಲಸಗಳು ಮುಂದಿನ ದಿನಗಳಲ್ಲಿ ಆಗಬಾರದೆಂದು ಸಲಹೆ ನೀಡಿದರು.ರೈತರೊಂದಿಗೆ ಭಾವನಾತ್ಮಕ ಸಂಬಂಧ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಈ ಹಿಂದಿನಿಂದಲೂ ಕನ್ನಂಬಾಡಿ ಅಣೆಕಟ್ಟೆ ಮತ್ತು ಈ ಭಾಗದ ರೈತರೊಂದಿಗೆ ಭಾವನಾತ್ಮಕ ಸಂಬಂಧವಿದೆ. ಅದಕ್ಕಾಗಿ ಗ್ರಾಮೀಣ ಜನರು ಈಗಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಪೂಜ್ಯ ಭಾವದಿಂದ ನೋಡುತ್ತಾರೆ. ಈ ಹಿಂದೆ ಸಮೃದ್ಧವಾಗಿ ಕೆಆರ್‌ಎಸ್ ಅಣೆಕಟ್ಟೆಯ ನೀರು ರೈತರಿಗೆ ಸಿಗುತ್ತಿದ್ದ ಪರಿಣಾಮ ಕಬ್ಬು ಬೆಳೆದ ರೈತ ಚೀಲದಲ್ಲಿ ಹಣವನ್ನು ತುಂಬಿಕೊಂಡು ಹೋಗುತ್ತಿದ್ದ. ಆದರೆ, ಈಗ ಅಂತಹ ಪರಿಸ್ಥಿತಿಯೇ ಇಲ್ಲ. ಕೆಆರ್‌ಎಸ್‌ನ ನೀರು ಇಡೀ ಜಿಲ್ಲೆ ತಲುಪುತ್ತಿಲ್ಲ. ಕೆಲವೇ ಭಾಗಕ್ಕಷ್ಟೇ ಸೀಮಿತವಾಗಿದೆ. ಅಲ್ಲೂ ಸಹ ಡ್ಯಾಂ ನೀರನ್ನೇ ನಂಬಿ ಬೆಳೆ ಬೆಳೆಯಲು ಆಗುತ್ತಿಲ್ಲ. ಹೆಚ್ಚುವರಿಯಾಗಿ ಮಳೆ ಅಥವಾ ಇನ್ನಿತರ ಕೃತಕ ನೀರನ್ನು ಬಳಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಾಲ್ವಡಿ ಅವರು ರೈತರ ಶ್ರೇಯೋಭಿವೃದ್ಧಿಗಾಗಿ ಡ್ಯಾಂ ನಿರ್ಮಿಸಿದಾಗ ಮಂಡ್ಯ ಜಿಲ್ಲೆಯ ಜನರು ಕುಡಿಯಲು ಮತ್ತು ಕೃಷಿ ಬೆಳೆಗೆ ಹಾಗೂ ಶಿವನಸಮುದ್ರದ ಬಳಿ ವಿದ್ಯುತ್ ತಯಾರಿಕೆಯಾಗಿ ಕೋಲಾರದ ಚಿನ್ನದ ಗಣಿ ಉತ್ಪಾದನೆಗೆ ನೀರು ಬಳಕೆಯಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಸರಬರಾಜಾಗಲು ಆರಂಭವಾಯಿತು. ಮೊದಲನೇ ಹಂತದಿಂದ ಆರಂಭವಾದ ನೀರು ಬಳಕೆ ಬೆಂಗಳೂರು ನಗರ ಬೆಳೆದಂತೆ ಇದೀಗ ಆರನೇ ಹಂತದ ಯೋಜನೆವರೆಗೂ ಬಂದು ನಿಂತಿದೆ. ಭವಿಷ್ಯದಲ್ಲಿ ಈ ಯೋಜನೆ ಹತ್ತನೇ ಹಂತ ತಲುಪಿದರೂ ಆಶ್ಚರ್ಯವಿಲ್ಲ. ಆಗ ಮಂಡ್ಯ ಜಿಲ್ಲೆಯ ಜನರು ಮತ್ತು ರೈತರ ಪರಿಸ್ಥಿತಿ ಎನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಸಾಹಿತಿ ಗಣಂಗೂರು ನಂಜೇಗೌಡ ಉಪಸ್ಥಿತರಿದ್ದರು.