ಕೊಟ್ಟೂರು: ಬಿತ್ತನೆ ಬೀಜ ಉತ್ಪಾದನೆಯನ್ನು ಮಾಡಿಕೊಳ್ಳಲು ನಮ್ಮ ರೈತರು ಸಾಮರ್ಥ್ಯ ಹೊಂದಿದ್ದರೂ ವಿದೇಶಿ ಕಂಪನಿಗಳ ಬಿತ್ತನೆ ಬೀಜಕ್ಕೆ ಅವಲಂಬನೆಯಾಗಿರುವುದು ಸರಿಯಲ್ಲ ಎಂದು ನಂದೀಪುರ ಡಾ.ಮಹೇಶ್ವರ ಸ್ವಾಮಿಗಳು ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಇಕ್ರಾ ಸಂಸ್ಥೆ ಆಯೋಜಿಸಿದ್ದ ಮಿಶ್ರ ಬೆಳೆ ಬೀಜ ಮೇಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತಾವು ಬೆಳೆದ ಬೆಳೆಗಳನ್ನು ಬಿತ್ತನೆಗಾಗಿ ಬೀಜ ಮಾಡಿಕೊಳ್ಳುತ್ತಿದ್ದ ಪದ್ದತಿಯನ್ನು ಇಂದಿನ ನಮ್ಮ ರೈತರು ಕೈ ಬಿಟ್ಟು, ಕಂಪನಿಗಳನ್ನು ಅವಲಂಬಿಸಿದ್ದಾರೆ. ದೇಶೀಯ ಕೃಷಿ ಪದ್ಧತಿಯನ್ನು ನಾವು ಕೈ ಬಿಟ್ಟಿದ್ದರೂ ವಿದೇಶಿಗರು ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ತಯಾರಾದ ಬಿತ್ತನೆ ಬೀಜ, ಯಾವಾಗಲೂ ಬಿತ್ತನೆಗೆ ಬರುತ್ತದೆ. ಆದರೆ ಕಂಪನಿಗಳ ಬೀಜಗಳನ್ನು ಒಮ್ಮೆ ಮಾತ್ರ ಬಿತ್ತನೆಗೆ ಬರುತ್ತವೆ. ಇದರಿಂದ ರೈತರು ಮೊದಲಿನಂತೆ ತಾವೇ ಬಿತ್ತನೆ ಬೀಜಗಳನ್ನು ತಯಾರಿಸಿಕೊಳ್ಳುವತ್ತ ಗಮನ ಹರಿಸಬೇಕು. ಈ ಭಾಗದಲ್ಲಿ ಮಿಶ್ರ ಬೆಳೆ, ಸಾವಯವ ಪದ್ಧತಿ ಅಳವಡಿಕೆಗೆ ರೈತರನ್ನು ಉತ್ತೇಜಿಸುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಪರಿಸರ ವಾದಿ ಸಿರಸಿಯ ಪಾಂಡುರಂಗ ಹೆಗಡೆ ಮಾತನಾಡಿ, ವಂದೇ ಮಾತರಂ ಗೀತೆಯನ್ನು ಹಾಡಿಸುವ ಸರ್ಕಾರ, ಹಾಡುವ ನಾವು ಹಾಡಿನ ಸಾರವನ್ನೇ ಅರಿತಿಲ್ಲ. ಭೂಮಿಯನ್ನು ಉಳಿಸುವ ಸಾರಾಂಶ ಹೊಂದಿರುವ ವಂದೇ ಮಾತರಂ ಗೀತೆ ಹಾಡಿಗಷ್ಟೇ ಸೀಮಿತವಾಗಿದೆ. ಇಂದಿನ ದಿನಗಳಲ್ಲಿ ಹೆಚ್ಚು ಇಳುವರಿಗಾಗಿ ನಾವುಗಳ ಭೂಮಿ ಮೇಲೆ ದೌರ್ಜನ್ಯ ಮಾಡುತ್ತಿದ್ದೇವೆ. ಹೆಚ್ಚು ರಾಸಾಯನಿಕ ಗೊಬ್ಬರ, ಔಷಧಗಳನ್ನು ಬಳಸದೇ ಸಾವಯವ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಸುವುದನ್ನು ರೈತರು ರೂಢಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ವಿಜಯಪುರದ ರಾಜಶೇಖರ ನಿಂಬರಗಿ ಮಾತನಾಡಿ, ಮೆಕ್ಕೆಜೋಳದಿಂದ ರೈತರಿಗೆ ಆಗುವ ಲಾಭಕ್ಕಿಂತ ಅದನ್ನು ಖರೀದಿಸುವ ಕಂಪನಿಗಗಳಿಗೆ ಹೆಚ್ಚು ಲಾಭವಾಗುತ್ತದೆ. ಊಟಕ್ಕೆ ಉಪಯೋಗವಿಲ್ಲದ ಅಡಿಕೆ ಬೆಳೆಯುವುದು ವ್ಯರ್ಥ. ರೈತರು ಭೂಮಿಯಲ್ಲಿ ಮಿಶ್ರ ತರಕಾರಿ, ಹಣ್ಣುಗಳನ್ನು ಬೆಳೆದು ಅನೇಕರಿಗೆ ಉದ್ಯೋಗ ನೀಡುವುದರ ಜೊತೆಗೆ ಹೆಚ್ಚು ಲಾಭ ಗಳಿಸಬಹುದಾಗಿದೆ ಎಂದರು.


ರೈತ ಮಹಿಳೆಯರಾದ ಕಾಂತಮಣಿ, ಗೀತಮ್ಮ, ಸಿ.ಮಂಜುನಾಥ ಇತರರು ಮಾತನಾಡಿದರು. ಎಪಿಎಂಸಿ ಕಾರ್ಯದರ್ಶಿ ಸಿ.ಕೆ.ವೀರಣ್ಣ , ಇಕ್ರಾ ಸಂಸ್ಥೆ ಮುಖ್ಯಸ್ಥ ಪಿ.ಬಾಬು ಇದ್ದರು.

ಇಕ್ರಾ ಸಂಸ್ಥೆಯ ಗಾಯತ್ರಿ ಪ್ರಾಸ್ತಾವಿಕ ಮಾತನಾಡಿದರು. ಚಪ್ಪರದಹಳ್ಳಿ ಮಂಜುನಾಥ, ಶಿಕ್ಷಕ ಕಾಂತರಾಜ, ಕೆ.ಕೊಟ್ರೇಶ ನಿರ್ವಹಿಸಿದರು.

ಮೇಳದಲ್ಲಿ ನೂರಕ್ಕೂ ಹೆಚ್ಚು ರೈತರು ಸಾವಯವ ಹಾಗೂ ನಾನಾ ಬಗೆಯ ಸೊಪ್ಪು, ತರಕಾರಿ, ಧಾನ್ಯಗಳ ಜವರಿ ಬಿತ್ತನೆ ಬೀಜಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.