ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ವಿಜಯದಶಮಿ ದಿನ ನನಗೆ ಬೆಳ್ಳಿ ಗದೆ ನೀಡಿ ಹಾರೈಸಿದ್ದೀರಿ. ಗದೆಯೊಡೆಯ ಹನುಮನ ಶಕ್ತಿಯಿಂದ ಕರ್ನಾಟಕದಲ್ಲಿನ ದುಷ್ಟಶಕ್ತಿ ಸಂಹರಿಸಿ ಹಿಂದೂಗಳು ತಲೆ ಎತ್ತಿ ನಡೆಯುವಂತೆ ಮಾಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಚಕ್ರಪುರವಾಸಿನಿ ಚಕ್ರೇಶ್ವರಿ ಜೋತಿರ್ ವಿಜ್ಞಾನ ಸಂಶೋಧನಾ ಕೇಂದ್ರದ ಪುಣ್ಯಕೋಟಿ ಆಶ್ರಮದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜ, ರಾಣಾಪ್ರತಾಪ, ಕಿತ್ತೂರು ರಾಣಿ ಚೆನ್ನಮ್ಮ, ಅಹಲ್ಯಾಬಾಯಿ ಹೋಳ್ಕರ್ ಹಿಂದೂ ಧರ್ಮ ರಕ್ಷಣೆಗಾಗಿ ಸರ್ವಸ್ವ ತ್ಯಾಗ ಮಾಡಿದ ಕಾರಣ ಇಂದಿಗೂ ಹಿಂದೂಗಳ ಹಣೆ ಮೇಲೆ ಕುಂಕುಮ, ನಾಮ, ವಿಭೂತಿ ಕಾಣುತ್ತಿವೆ ಎಂದರು.
ಮುಸಲ್ಮಾನರು ಭಾರತ ಮಾತೆಗೆ ನಿಷ್ಠರಾಗಿರಲ್ಲ. ಅವರನ್ನು ಪಾಕಿಸ್ತಾನಕ್ಕೆ ಕಳಿಸಿ ಎಂದು ಹೇಳಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೇ ದೂರ ಮಾಡಲಾಯಿತು. ಮುಸಲ್ಮಾನರು ನಮ್ಮ ರಾಷ್ಟ್ರ ಮತ್ತು ರಾಷ್ಟ್ರ ಧ್ವಜ, ಸಂವಿಧಾನಕ್ಕೆ ಗೌರವ ನೀಡುತ್ತಿಲ್ಲ. ಕುರಾನ್ ನಮ್ಮ ಸಂವಿಧಾನ ಎನ್ನುತ್ತಾರೆ. ಆದರೆ ವಿಜಯಪುರದಲ್ಲಿ 11 ಸಾವಿರ ಎಕರೆ ವಕ್ಫ್ ಆಸ್ತಿಯಿದೆ. ಕರ್ನಾಟಕದಲ್ಲಿ 1 ಲಕ್ಷದ 11 ಸಾವಿರ ವಕ್ಫ್ ಆಸ್ತಿ ಇದೆ. ಆ ಆಸ್ತಿ ಬಗ್ಗೆ ವಿಚಾರಣೆ ಅಥವಾ ತೀರ್ಪು ಕೊಡುವ ಅಧಿಕಾರ ನಮ್ಮ ಸುಪ್ರೀಂ ಕೋರ್ಟಿಗೂ ಇಲ್ಲ. ಬದಲಾಗಿ ವಕ್ಫ್ ಟ್ರಿಬುನಲ್‌ಗೆ ಇದೆ. ಇದು ನಾಚಿಗೇಡಿನ ಕಾನೂನು ಎಂದು ಜರಿದರು.ಹಿಂದೂ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರು ಜಾತಿ ಬೇಧ ಮರೆತು ಒಂದಾಗಬೇಕಿದೆ. ಧರ್ಮ ರಕ್ಷಣೆಗಾಗಿ ಹೋರಾಟಕ್ಕೂ ಸಿದ್ಧವಾಗಬೇಕಿದೆ. ಈ ಕ್ಷಣದಲ್ಲಿ ಅರಿತುಕೊಳ್ಳದಿದ್ದರೆ ಹಿಂದೂ ದೇವಸ್ಥಾನ, ಗುಡಿ, ಗುಂಡಾರಗಳು ಮತ್ತು ಹಿಂದೂಗಳು ಉಳಿಯುವುದಿಲ್ಲ. ಭಾರತ ಮತ್ತೊಂದು ಬಾಂಗ್ಲಾವಾಗುತ್ತದೆ ಎಂದ ಅವರು, ಹನುಮಂತ ಜೀವಂತ ದೇವರು. ಹನುಮಾನ್ ಚಾಲೀಸಾ ಪಠಣದಿಂದ ಸರ್ವ ಕಷ್ಟಗಳೂ ಪರಿಹಾರವಾಗುತ್ತವೆ. ಯೋಗದಿಂದ ಶಸ್ತ್ರ ಚಿಕಿತ್ಸೆ ಇಲ್ಲದೇ ಪರಿಹಾರವಿದೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪುಣ್ಯಕೋಟಿ ಆಶ್ರಮದ ಡಾ.ರಮೇಶಕುಮಾರ ಶಾಸ್ರಿ ಅವರು ಬೆಳ್ಳಿ ಗದೆ ಉಡುಗೊರೆ ನೀಡಿ ಮುಂದೆ ಮುಖ್ಯಮಂತ್ರಿಯಾಗುತ್ತೀರಿ ಎಂದು ಭವಿಷ್ಯ ನುಡಿದರು.ಪುಣ್ಯಕೋಟಿ ಸಿದ್ದಾಶ್ರಮದ ಚಿದಾನಂದ ಮಹಾರಾಜ (ಡಾ.ರಮೇಶಕುಮಾರ ಶಾಸ್ತ್ರಿ), ಹೊಸಯರಗುದ್ರಿ ಈರಾಲಿಂಗೇಶ್ವರ ಮಠದ ಸಿದ್ಧಪ್ರಭು ಶಿವಾಚಾರ್ಯ ಸ್ವಾಮೀಜಿ, ರನ್ನಬೆಳಗಲಿ ಸದಾಶಿವ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಪಪಂ ಸದಸ್ಯ ಸಿದ್ದುಗೌಡ ಪಾಟೀಲ ಅಧ್ಯಕ್ಷತೆ ವಹಿಸಿ, ಮುಖಂಡರಾದ ಅರುಣ ಕಾಜೋಳ, ಧರೆಪ್ಪ ಸಾಂಗ್ಲಿಕರ, ರುದ್ರಗೌಡ ಪಾಟೀಲ, ಸಂಗನಗೌಡ ಕಾತರಕಿ ಅಶೋಕ ಸಿದ್ದಾಪುರ, ಪಂಡಿತ ಪೂಜಾರಿ, ಶಿವನಗೌಡ ಪಾಟೀಲ, ದುಂಡಪ್ಪ ರಾವಳ, ಚಿಕ್ಕಪ್ಪ ನಾಯಕ, ಗಣೇಶ ಪೂಜೇರಿ ಇತರರಿದ್ದರು.