ವಿದ್ಯಾರ್ಥಿ ಸ್ನೇಹಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ

| Published : Mar 14 2025, 12:35 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.೨೧ರಿಂದ ಆರಂಭಗೊಳ್ಳುತ್ತಿದ್ದು, ಮಕ್ಕಳಲ್ಲಿನ ಗೊಂದಲ ನಿವಾರಣೆಗೆ ಮುಂದಾಗಿರುವ ಶಾಲಾ ಶಿಕ್ಷಣ ಇಲಾಖೆ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರಿಂದ ೫೦೦ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿದ್ದು, ೮೯೬ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರ ನೀಡಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.೨೧ರಿಂದ ಆರಂಭಗೊಳ್ಳುತ್ತಿದ್ದು, ಮಕ್ಕಳಲ್ಲಿನ ಗೊಂದಲ ನಿವಾರಣೆಗೆ ಮುಂದಾಗಿರುವ ಶಾಲಾ ಶಿಕ್ಷಣ ಇಲಾಖೆ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರಿಂದ ೫೦೦ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿದ್ದು, ೮೯೬ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರ ನೀಡಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.

ನಗರದ ಡಿಡಿಪಿಐ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗಾಗಿ ನಡೆಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲವು ಮಕ್ಕಳ ಪ್ರಶ್ನೆಗಳಿಗೆ ಡಿಡಿಪಿಐ ಅವರೇ ಸ್ವತಃ ಉತ್ತರ ನೀಡಿ ಮಾತನಾಡಿದರು.

ಮುಖ್ಯಶಿಕ್ಷಕರ ಸಭೆಗಳನ್ನು ನಡೆಸಿ ಪರೀಕ್ಷಾ ಸಿದ್ಧತೆಗಳಿಗೆ ಮಾರ್ಗದರ್ಶನ ನೀಡಲಾಗಿದೆ, ಆದರೂ ಕೆಲವು ಮಕ್ಕಳಲ್ಲಿ ಇರಬಹುದಾದ ಗೊಂದಲ ನಿವಾರಣೆಗೆ ಫೋನ್ ಇನ್ ಕಾರ್ಯಕ್ರಮದ ಮೂಲಕ ಪ್ರಯತ್ನಿಸಲಾಗಿದೆ ಎಂದರು.

ಪ್ರಶ್ನೆ ಕೇಳಿದ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ, ಸಿಸಿ ಕ್ಯಾಮೆರಾ ಅಳವಡಿಕೆ, ವೆಬ್ ಕಾಸ್ಟಿಂಗ್ ವ್ಯವಸ್ಥೆ, ಕೇಂದ್ರದಲ್ಲಿ ನಕಲು ತಡೆಯಲು ಇರುವ ಅಧಿಕಾರಿ, ಸಿಬ್ಬಂದಿಯಿಂದ ಒತ್ತಡ ಎದುರಾಗುವುದೇ ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

ನಕಲು ತಡೆಗೆ ಕ್ರಮ, ಮುಜುಗರ ಇಲ್ಲ:

ಡಿಡಿಪಿಐ ಅವರು ಕೆಲವು ಮಕ್ಕಳಿಗೆ ಉತ್ತರ ನೀಡಿ, ಕೇಂದ್ರದಲ್ಲಿ ಸಿಸಿ ಕ್ಯಾಮೆರಾ, ವೆಬ್ ಕಾಸ್ಟಿಂಗ್ ಇದೆ, ಜತೆಗೆ ನಕಲು ತಡೆಗೆ ಕ್ರಮವಹಿಸಿರುವುದು ನಿಜವಾದರೂ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ಮುಜುಗರವಾಗದಂತೆ ಕ್ರಮವಹಿಸಲಾಗಿದೆ, ಮಕ್ಕಳನ್ನು ಅನಗತ್ಯವಾಗಿ ತಪಾಸಣೆಗೆ ಒಳಪಡಿಸಿ ಆತಂಕ ಸೃಷ್ಟಿಸುವ ಕೆಲಸ ಮಾಡುವುದಿಲ್ಲ, ಪರೀಕ್ಷೆಗಳನ್ನು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸುವುದಾಗಿ ತಿಳಿಸಿದರು.

ಮಕ್ಕಳು ಉತ್ತಮ ಅಂಕ ಗಳಿಸಲು ಸಹಕಾರಿಯಾಗುವಂತೆ ಈಗಾಗಲೇ ಇಲಾಖೆ ಅನೇಕ ಸಂಪನ್ಮೂಲ ಪುಸ್ತಕಗಳನ್ನು ಒದಗಿಸಿದೆ, ಅದನ್ನು ಚೆನ್ನಾಗಿ ಅಭ್ಯಾಸ ಮಾಡುವಂತೆ ತಿಳಿಸಲಾಗಿದೆ, ಕೆಲವು ಮಕ್ಕಳು ಶೇ.೧೦೦ ಸಾಧನೆಗೆ ಏನು ಮಾಡಬೇಕು ಎಂದು ಕೇಳಿದರು ಎಂದರು.

ಶೇ.೧೦೦ ಸಾಧನೆಗೆ ಶಿಕ್ಷಕರು ಹೇಳುವ ಪಾಠದ ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ಮಾಡಿ ಅದರಿಂದ ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದಾಗಿದ್ದು, ಆಗ ಶೇ.೧೦೦ರಷ್ಟು ಸಾಧನೆ ಮಾಡಬಹುದು ಎಂದು ತಿಳಿಸಿದರು.

ನಿರಂತರ ಪುನರ್ಮನನ ಮಾಡಿದರೆ ಎಲ್ಲಾ ಉತ್ತರಗಳು ನೆನಪಿನಲ್ಲಿರಲು ಸಾಧ್ಯ, ಪ್ರಶ್ನೆ ಪತ್ರಿಕೆ ಸುಲಭವಾಗಿರಲಿದೆ, ಶೇ.೨೦ ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರುತ್ತವೆ, ಪುಸ್ತಕದಲ್ಲಿನ ಮಾಹಿತಿ ಹೊರತುಪಡಿಸಿ ಬೇರಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜ್ಞಾನ ವಿಷಯದ್ದೇ ಅತಿ ಹೆಚ್ಚು ಪ್ರಶ್ನೆ:

ಪರೀಕ್ಷಾ ನೋಡಲ್ ಅಧಿಕಾರಿ ಸಗೀರಾ ಅಂಜುಂ, ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳ ಕುರಿತು ಮಾಹಿತಿ ನೀಡಿ, ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ ೫೪ ಹೆಚ್ಚು ಪ್ರಶ್ನೆಗಳು ಮಕ್ಕಳಿಂದ ಬಂದವು. ಆದರೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ೧೮೦ ಪ್ರಶ್ನೆಗಳನ್ನು ಮಕ್ಕಳು ಕೇಳಿದ್ದು ವಿಶೇಷವಾಗಿದೆ ಎಂದರು.

ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ೧೧೦ ಪ್ರಶ್ನೆ, ಇಂಗ್ಲಿಷ್ ವಿಷಯಕ್ಕೆ ೧೭೮ ಪ್ರಶ್ನೆ, ಹಿಂದಿಗೆ ೭೯ ಪ್ರಶ್ನೆ, ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ೧೩೦, ವಿಜ್ಞಾನ ವಿಷಯಕ್ಕೆ ೧೮೦ ಪ್ರಶ್ನೆ ಹಾಗೂ ಸಮಾಜವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ೧೪೦ ಹಾಗೂ ಉರ್ದು ವಿಷಯಕ್ಕೆ ೨೫ ಪ್ರಶ್ನೆಗಳನ್ನು ಮಕ್ಕಳು ಕೇಳಿದರು ಎಂದು ವಿವರಿಸಿದರು.

ಮಕ್ಕಳು ಅತಿ ಹೆಚ್ಚು ಅಂಕಗಳಿಸಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸಗೀರಾ ಅಂಜುಂ, ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಪ್ರತಿ ಅಧ್ಯಯದ ಅಭ್ಯಾಸದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ಇಲಾಖೆ ನೀಡಿರುವ ಪಾಸಿಂಗ್ ಪ್ಯಾಕೇಜ್, ಜಿಲ್ಲಾಡಳಿತ ನೀಡಿರುವ ಪರೀಕ್ಷಾ ದೀವಿಗೆ ಓದಿ, ಐದು ಸೆಟ್ ಮಾದರಿ ಪ್ರಶ್ನೆಪತ್ರಿಕೆ ನೀಡಿದ್ದು ಪ್ರಶ್ನೆಗಳಿಗೆ ನೀವೇ ಉತ್ತರ ಬರೆದು ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ವೀಣಾ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ಸಂಪನ್ಮೂಲ ಶಿಕ್ಷಕರಾದ ಬಿ.ಕೆ.ನಾಗರಾಜ್, ವೇಣುಗೋಪಾಲ್, ರಾಜಣ್ಣ, ಬಿ.ಎ.ಕವಿತಾ, ರಮಾ, ಕೃಷ್ಣಮೂರ್ತಿ, ಪ್ರಭಾ, ಎಸ್.ಭಾಗ್ಯ, ಬಸವರಾಜ್, ಶ್ರೀನಿವಾಸಗೌಡ, ನರಸಿಂಹಪ್ರಸಾದ್, ಅಮರೇಶಬಾಬು,ಗಂಗಾಧರಮೂರ್ತಿ, ರಾಜರೆಡ್ಡಿ, ವಜಿಹ್ ಸುಲ್ತಾನಾ, ಫರೀದಾ ಬೇಗಂ ಹಾಜರಿದ್ದು, ಮಕ್ಕಳ ದೂರವಾಣಿ ಕರೆ ಸ್ವೀಕರಿಸಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಂದಲ ಪರಿಹರಿಸಿದರು.