ಸಾರಾಂಶ
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ರಚಿಸಿರುವ ವಿವಾದಿತ ಜಿಲ್ಲಾ-ತಾಲೂಕು ಹುದ್ದೆಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದ್ದು ಆ ಮೂಲಕ ಜನರ ತೆರಿಗೆ ದುಡ್ಡನ್ನು ಸರ್ಕಾರ ಲೂಟಿ ಮಾಡುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ರಚಿಸಿರುವ ವಿವಾದಿತ ಜಿಲ್ಲಾ-ತಾಲೂಕು ಹುದ್ದೆಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದ್ದು ಆ ಮೂಲಕ ಜನರ ತೆರಿಗೆ ದುಡ್ಡನ್ನು ಸರ್ಕಾರ ಲೂಟಿ ಮಾಡುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸರ್ಕಾರದ ಗ್ಯಾರಂಟಿಗಳಿಗೆ ನಮ್ಮ ಯಾವುದೇ ವಿರೋಧವಿಲ್ಲ. ಮಹಿಳೆಯರಿಗೆ 2,000ರ ರು. ಬದಲು 5,000 ರುಪಾಯಿ ನೀಡಲಿ, ಉಚಿತ 200 ಯೂನಿಟ್ ವಿದ್ಯುತ್ ಬದಲು 500 ಯೂನಿಟ್ ನೀಡಲಿ, 5ರ ಬದಲು 10 ಕೆಜಿ ಅಕ್ಕಿ ನೀಡಲಿ, ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಈಗಾಗಲೇ ಆಡಳಿತ ವ್ಯವಸ್ಥೆಯಲ್ಲಿ ಅನೇಕಾರು ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಇರುವಾಗ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಮುಖ ಹುದ್ದೆ ಸೃಷ್ಟಿಸಿ ಸರ್ಕಾರದ ಬೊಕ್ಕಸದಿಂದಲೇ ಕೋಟ್ಯಂತರ ರುಪಾಯಿ ವೇತನ ನೀಡುವುದು ಅಧಿಕಾರದ ದುರುಪಯೋಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದ ನಾಲ್ಕು ಲಕ್ಷ ಕೋಟಿ ರು.ಗಳ ಬಜೆಟ್ ಅನುಷ್ಠಾಕ್ಕೂ ಇಲ್ಲದ ವಿಶೇಷ ಸಮಿತಿ ಐವತ್ತು ಸಾವಿರ ಕೋಟಿ ರು.ಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಯಾಕೆ ಬೇಕು? ಡಿಸಿಎಂ ಅವರಂತೂ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದ ಕಾರ್ಯಕರ್ತರಿಗೆ ಲಾಭ ಮಾಡಿಕೊಟ್ಟರೆ ಏನು ತಪ್ಪು ಎಂದು ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಅವರಿಗೆ ಎಷ್ಟು ಬೇಕಾದರೂ ವೇತನವನ್ನು ಕೊಡಲಿ. ಅದು ಬಿಟ್ಟು ರಾಜ್ಯದ ಜನರ ಶ್ರಮದ ದುಡ್ದು ಲೂಟಿ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ, ಕೂಡಲೇ ಇದನ್ನು ರದ್ದು ಮಾಡಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದರು.