ಬೇರೆ ಧರ್ಮಕ್ಕಿಂತ ಇಸ್ಲಾಂ ಶ್ರೇಷ್ಠ ಎಂಬ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಹೇಳಿಕೆ ಕೀಳುಮಟ್ಟದಿಂದ ಕೂಡಿದೆ. ಹಿಂದುತ್ವದ ವಿರುದ್ಧ ಮಾತನಾಡುವುದು ನೀಚತನ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ: ಬೇರೆ ಧರ್ಮಕ್ಕಿಂತ ಇಸ್ಲಾಂ ಶ್ರೇಷ್ಠ ಎಂಬ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಹೇಳಿಕೆ ಕೀಳುಮಟ್ಟದಿಂದ ಕೂಡಿದೆ. ಹಿಂದುತ್ವದ ವಿರುದ್ಧ ಮಾತನಾಡುವುದು ನೀಚತನ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಧರ್ಮವೇ ಮೇಲು’ ಎಂಬ ಭಾವನೆ ಹೊಂದಿರುವುದು ತಪ್ಪಲ್ಲ. ಆದರೆ, ಬೇರೊಂದು ಧರ್ಮವೇ ಶ್ರೇಷ್ಠ ಎಂದು ಹೇಳುವುದು ಕೀಳು ಅಭಿರುಚಿ. ಯಾರನ್ನು ಓಲೈಸಲು ಇಂತಹ ಹೇಳಿಕೆ ನೀಡಬೇಕು? ರಾಜಕೀಯಕ್ಕಾಗಿ ಓಟ್‌ ಬ್ಯಾಂಕ್‌ ಓಲೈಕೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಹಿಂದೂಗಳು ಎಂದು ಹೇಳಿಕೊಂಡ ಮಾತ್ರಕ್ಕೆ ಇಸ್ಲಾಂ ಅಥವಾ ಕ್ರೈಸ್ತ ಧರ್ಮದ ವಿರೋಧಿಗಳಲ್ಲ. ಎಲ್ಲ ಧರ್ಮಗಳಿಗೂ ಗೌರವ ನೀಡಬೇಕು. ಆದರೆ, ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದು ರಾಜಕೀಯ ತಂತ್ರಗಾರಿಕೆಯ ಭಾಗವಾಗಿದೆ ಎಂದು ಟೀಕಿಸಿದರು.

ರಾಯರಡ್ಡಿ ಅವರು ತಮ್ಮ ಹೇಳಿಕೆಗೆ ಹಿಂದೂ ಸಮಾಜದ ಕ್ಷಮೆ ಕೇಳಬೇಕು. ಇಲ್ಲವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂದರ್ಭಕ್ಕೆ ತಕ್ಕಂತೆ ಏನು ಬೇಕಾದರೂ ಹೇಳುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಮರ್ಥಿಸುವುದೂ ತಪ್ಪು ಎಂದರು.

ರಾಯರಡ್ಡಿ ಅವರ ಹೇಳಿಕೆಯ ಹಿಂದಿನ ರಾಜಕೀಯವನ್ನು ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ಅನ್ನು ಮುಸ್ಲಿಮರು ನಂಬಬಾರದು. ಕಾಂಗ್ರೆಸ್‌ ಇರುವವರೆಗೂ ಮುಸ್ಲಿಮರಿಗೆ ಭವಿಷ್ಯವಿಲ್ಲ ಎಂದು ಆರೋಪಿಸಿದರು.

ಜಾತಿ, ಧರ್ಮದ ಆಧಾರದ ಮೇಲೆ ಟಿಕೆಟ್‌ ನೀಡುವ ಸಂಸ್ಕೃತಿ ನಮ್ಮದಲ್ಲ. ಯೋಗ್ಯ ಸ್ಥಾನಕ್ಕೆ ಯೋಗ್ಯ ವ್ಯಕ್ತಿಗಳು ಸಿಗುವ ವರೆಗೆ ಟಿಕೆಟ್‌ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಸ್ಲಿಮರಿಗೆ ಬಿಜೆಪಿ ಟಿಕೆಟ್‌ ನೀಡುವುದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಪಾದಯಾತ್ರೆ 10 ಅಂಶಗಳ ಕಾರ್ಯಕ್ರಮ

ಲಿಂಗಸಗೂರು–ಬಳ್ಳಾರಿ ನಡುವಿನ ಬಿಜೆಪಿ ಪಾದಯಾತ್ರೆ ಒಂದೇ ಅಂಶದ ಕಾರ್ಯಕ್ರಮವಲ್ಲ. ಅದು 10 ಅಂಶಗಳ ಕಾರ್ಯಕ್ರಮ. ಮೊದಲ ಅಂಶಕ್ಕೆ ಸಚಿವರ ರಾಜೀನಾಮೆಯ ರೂಪದಲ್ಲಿ ಉತ್ತರ ಸಿಕ್ಕಿದ್ದು, ಇದು ಸಮುದಾಯಕ್ಕೆ ಸಿಕ್ಕ ಗೆಲುವು. ಉಳಿದ ಒಂಬತ್ತು ಅಂಶಗಳಲ್ಲೂ ಗೆಲುವು ಸಾಧಿಸಬೇಕಿದೆ ಎಂದರು.

ಹಿಂದೆ ಪ್ರಿಯಾಂಕ್ ಖರ್ಗೆ ಆರ್‌ಡಿಪಿಆರ್‌ ಸಚಿವರಾಗಿದ್ದ ವೇಳೆ ಇಲಾಖೆಯಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಸಮನ್ವಯದ ಕೊರತೆ

ಬಿಜೆಪಿ–ಜೆಡಿಎಸ್‌ನಲ್ಲಿ ಸಮನ್ವಯದ ಕೊರತೆ ಇರುವುದು ನಿಜ. ಈ ಕುರಿತು ಸಮನ್ವಯ ಸಮಿತಿ ರಚಿಸುವಂತೆ ಹಿಂದೆಯೇ ಪಕ್ಷದ ನಾಯಕರಿಗೆ ಮನವಿ ಮಾಡಿದ್ದೆವು. ಪಾದಯಾತ್ರೆ ಸ್ಥಳೀಯ ವಿಚಾರವಾಗಿದ್ದು, ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ಸ್ಥಳೀಯ ನಾಯಕತ್ವದೊಂದಿಗೆ ಚರ್ಚಿಸಿ ಮುಂದುವರಿಯಬೇಕು. ಎರಡೂ ಪಕ್ಷಗಳಲ್ಲಿ ಸಮನ್ವಯದ ಕೊರತೆ ಇದ್ದು, ಸಮಿತಿ ರಚನೆಯಾಗಬೇಕು ಎಂದು ಹೇಳಿದರು.