ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಹಿಂದೂ ಧರ್ಮದಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಭಕ್ತರು ಹರಕೆ ಒಪ್ಪಿಸುವ ಪದ್ಧತಿ ಅನಾದಿಕಾಲದಿಂದಲೂ ರೂಢಿಗತವಾಗಿ ಬಂದಿದೆ. ತಮ್ಮ ಇಷ್ಟ ದೇವರಿಗೆ ಆಯಾಪ್ರದೇಶದ ಆಚರಣೆಗೆ ತಕ್ಕಂತೆ ಹೂವು ಹಣ್ಣುಗಳನ್ನು ಹರಕೆರೂಪದಲ್ಲಿ ಭಕ್ತರು ಒಪ್ಪಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಆದರೆ ಇಲ್ಲೊಂದು ದೇವಳದಲ್ಲಿ ಹರಕೆ ವಸ್ತು ವಿಚಿತ್ರ ಹಾಗೂ ವಿಶೇಷ.ಹೌದು, ನಾಪೋಕ್ಲು ಬಳಿಯ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನದಲ್ಲಿ ಭಕ್ತರು ಹರಕೆ ರೂಪದಲ್ಲಿ ಮಣ್ಣಿನ ನಾಯಿಗಳ ಪ್ರತಿಕೃತಿಯನ್ನು ಒಪ್ಪಿಸುವಂತಹ ವಿಶಿಷ್ಟ ಆಚರಣೆ ಇದೆ. ಹರಕೆಯ ಕಾರಣದಿಂದ ದೇವಾಲಯದ ಸುತ್ತಲೂ ಮಣ್ಣಿನ ನಾಯಿಗಳ ಪ್ರತಿಕೃತಿ ಕಾಣಸುಗುತ್ತದೆ.
ದಟ್ಟ ಕಾನನದ ಮದ್ಯೆ ಸುಮಾರು 6 ಅಡಿ ಎತ್ತರದ ವೃತ್ತಾಕಾರದ ಕಟ್ಟೆ, ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ಸನ್ನಿಧಿ. ದೇವರಿಗೆ ಆಧ್ರಯವಿತ್ತಂತೆ ತೋರುವ ಒಂದು ಹಲಸಿನ ಮರ, ಸುತ್ತಲೂ ಸಹಸ್ರಾರು ಹರಕೆಯ ಮಣ್ಣಿನ ನಾಯಿಗಳು ಇದು ಮಕ್ಕಿ ಶಾಸ್ತಾವು ಸನ್ನಿಧಿಯ ಚಿತ್ರಣ.ಇಷ್ಟಾರ್ಥ ಸಿದ್ಧಿಗೆ ಹರಕೆ ನಾಯಿ ಪ್ರತಿಕೃತಿ:
ಈ ದೇವಸ್ಥಾನದಲ್ಲಿ ಹರಕೆಯ ನಾಯಿ ತಯಾರಿಸುವ ಮತ್ತು ದೇವರಿಗೆ ಒಪ್ಪಿಸುವ ಕ್ರಮ ಅಪರೂಪದ್ದಾಗಿದೆ. ಈ ದೇವಾಲಯಕ್ಕೆ ಶ್ರದ್ಧಾಭಕ್ತಿಯಿಂದ ಮಣ್ಣಿನ ನಾಯಿ ತಯಾರಿಸಲೆಂದೇ ಒಂದು ವರ್ಗದ ಜನರಿದ್ದಾರೆ. ಹಬ್ಬಕ್ಕೆ ಹದಿನೈದು ದಿನಗಳ ಮೊದಲು ನಿಗದಿತ ಸ್ಥಳದಲ್ಲಿ ಮಣ್ಣಿನ ನಾಯಿಯ ರಚನೆ ಕಾರ್ಯ ನಡೆಯುತ್ತದೆ. ಹಬ್ಬಕ್ಕೆ ಒಂದು ದಿವಸ ಮೊದಲು ತಯಾರಿಸಿದ ಮಣ್ಣಿನ ನಾಯಿಯನ್ನು ಸುಡುವ, ಹದಮಾಡುವ ಕ್ರಮವಿದೆ. ಹಬ್ಬಕ್ಕಿಂತ ಒಂದು ತಿಂಗಳ ಮೊದಲು ವೃಶ್ಚಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ.ಪುರಾತನ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಬೇತು ಗ್ರಾಮಕ್ಕೆ ಸಂಬಂಧಿಸಿದ 12 ಕುಲದವರು 12 ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಇಲ್ಲಿ ಸಲ್ಲಿಸಬೇಕು ಎನ್ನುವ ಪದ್ಧತಿ ಇದೆ. ಉಳಿದಂತೆ ಗ್ರಾಮದ ಜನ, ಭಕ್ತರು ಹರಕೆಯ ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ನಿಗದಿತ ಮೊತ್ತವನ್ನು ನೀಡಬೇಕಾಗುತ್ತದೆ.
* ವರ್ಷಕ್ಕೆರಡು ಬಾರಿ ಹಬ್ಬ:ಮಕ್ಕಿ ಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ವಿಭಿನ್ನ ಆಚರಣೆಗಳ ಹಬ್ಬ ಒಮ್ಮೆ ಮೇ ತಿಂಗಳಲ್ಲಿ ಜರುಗಿದರೆ ಮತ್ತೊಮ್ಮೆ ಡಿಸೆಂಬರ್‌ನಲ್ಲಿ ನಡೆಯುತ್ತದೆ. ಎತ್ತೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೆರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ. ಮಕ್ಕಿ ದೇವಾಲಯದ ವಿಶಿಷ್ಟತೆಗೆ ಸಂಬಂಧಿಸಿದಂತೆ ಹಲವು ಕಥೆಗಳು ಪಚ್ರಲಿತದಲ್ಲಿದೆ.
* ಇದು ಮೊದಲನೇ ಹಬ್ಬಈಗ ನಡೆಯುವುದು ಮೊದಲನೇ ಹಬ್ಬವಾಗಿದ್ದು, ಎರಡನೇ ಮುಖ್ಯ ಹಬ್ಬ ಮೇ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ. ಈಗ ನಡೆಯುವ ಹಬ್ಬದಲ್ಲಿ ಎತ್ತೇರಾಟದ ಬದಲಿಗೆ ಹರಕೆಯ ನಾಯಿ ಸಲ್ಲಿಸಲಾಗುತ್ತದೆ. ಇಲ್ಲಿ ಹರಕೆಯ ನಾಯಿ ತಯಾರಿಸುವ ಮತ್ತು ದೇವರಿಗೆ ಒಪ್ಪಿಸುವ ಕ್ರಮ ಅಪರೂಪದ್ದಾಗಿದೆ. ಪುರಾತನ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಬೇತು ಗ್ರಾಮಕ್ಕೆ ಸಂಬಂಧಿಸಿದ 12 ಕುಲದವರು 12 ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಇಲ್ಲಿ ಸಲ್ಲಿಸಬೇಕು ಎನ್ನುವ ಪದ್ಧತಿ ನಡೆದುಕೊಂಡು ಬಂದಿದೆ. ಉಳಿದಂತೆ ಗ್ರಾಮದ ಜನ, ಭಕ್ತರು ಹರಕೆಯ ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ನಿಗದಿತ ಮೊತ್ತವನ್ನು ನೀಡಬೇಕಾಗುತ್ತದೆ.* ಹಲಸಿನ ಮರದಲ್ಲಿ ಕೋಳದ ತುಣುಕು:
ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಹಲಸಿನ ಮರದಲ್ಲಿ ಕೋಳದ ತುಣುಕೊಂದು ಸಿಲುಕಿಕೊಂಡಿರುವುದನ್ನು ಕಾಣಬಹುದು. ಇದರ ಕಾರಣ ಬಗ್ಗೆ ಒಂದು ಕಥೆ ಪ್ರಚಲಿತದಲ್ಲಿದೆ.ಹಿಂದೆ ಮಕ್ಕಿ ದೇವಾಲಯದಲ್ಲಿ ಹಬ್ಬದ ಸಂದರ್ಭ ತಿರುವಾಳ ಕಾರ್ಯ ನಿರ್ವಹಿಸುತ್ತಿದವನನ್ನು ಯಾವುದೋ ಕಾರಣಕ್ಕಾಗಿ ಬಂಧಿಸಲಾಗಿತ್ತಂತೆ. ಹಬ್ಬದ ಸಂದರ್ಭದಲ್ಲಿ ದೇವಾಲಯದಲ್ಲಿ ಮುಗಿಲುಮುಟ್ಟುವಂತೆ ಚಂಡೆ ವಾದ್ಯ ಮೊಳಗಿತು. ಅದೇ ಸಂದರ್ಭ ಸೆರೆಮನೆಯಲ್ಲಿದ್ದವನಿಗೆ ತಿರುವಳ (ಮೈಯಲ್ಲಿ ಆವೇಶ ಬರುವುದು) ಆರಂಭವಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದನಂತೆ. ಆತ ನೇರವಾಗಿ ಮಕ್ಕಿ ದೇವಾಲಯದ ಪ್ರಾಂಗಣಕ್ಕೆ ಬಂದವನೇ ದೇವರ ಮುಂದೆ ತನ್ನ ಕೈಯನ್ನು ಕೊಡವಿದ ತಕ್ಷಣ ಕೈಯ ಕೋಳ ಒಡೆದು ದೇಗುಲವಿರುವ ತಾಣದ ಹಲಸಿನ ಮರದ ರೆಂಬೆಯೊಂದರಲ್ಲಿ ಸಿಲುಕಿತು ಎನ್ನಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಮರದಲ್ಲಿ ಈಹಲೂ ಕೋಳದ ತುಣುಕಿದೆ.
* ಹರಕೆ ಸಲ್ಲಿಸುವ ವಿಧಾನಮಣ್ಣಿನ ನಾಯಿಗಳನ್ನು ಹಬ್ಬದ ಮೊದಲ ದಿನ ಬೆಳಗಿನ ಜಾವ ಯಾರೂ ಕಾಣದಂತೆ ಬೇತು ಮಂದ್ ಸಮೀಪದ ಕರ್ಪತಚ್ಚನ್ ನಡೆ ಎಂಬ ಸ್ಥಳಕ್ಕೆ ಸಾಗಿಸಲಾಗುತ್ತದೆ. ಅನಂತರ ಬೆಳಗ್ಗೆ ೧೧ ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೊದಲಿಗೆ ದೇವಾಲಯಕ್ಕೆ ಸಂಬಂಧಿಸಿದವರು ಮತ್ತು ಅನಂತರ ಮಣ್ಣಿನ ನಾಯಿಯ ಹರಕೆ ಹೊತ್ತವರು ಸೇರಿದಂತೆ ಸಂಬಂಧಪಟ್ಟ ಮುಖ್ಯಸ್ಥರೊಡನೆ ಮಣ್ಣಿನ ನಾಯಿಗಳನ್ನು ಶೇಖರಿಸಿಟ್ಟು ಸ್ಥಳಕ್ಕೆ ತೆರಳಿ ಹೂಗಂಧಗಳ ಲೇಪನದಿಂದ ಅವುಗಳನ್ನು ಪೂಜಿಸಿ ದೇವಾಲಯಕ್ಕೆ ಹೊತ್ತು ತರಲಾಗುತ್ತದೆ. ಈ ಸಂದರ್ಭ ಯಾರೂ ಇವರ ಎದುರು ಕಾಣಿಸಿಕೊಳ್ಳಬಾರದು ಎಂಬ ನಂಬಿಕೆ ಕೂಡ ಇದೆ. ಅದಕ್ಕಾಗಿ ಈ ನಿಗದಿತ ಸಮಯದಲ್ಲಿ ನಾಯಿಗಳನ್ನು ಹೊತ್ತೊಯ್ಯುವ ಮಾರ್ಗದಲ್ಲಿ ಗ್ರಾಮಸ್ಥರು ಸುಳಿದಾಡುವುದನ್ನು ನಿಷೇಧಿಸಲಾಗಿದೆ.
ಮಣ್ಣಿನ ಹರಕೆ ನಾಯಿಗೆ ರೊಟ್ಟಿ ತಯಾರಿಸುವ ವಿಶಿಷ್ಟ ಪದ್ಧತಿಯನ್ನು ಕೂಡ ಕಾಣಬಹುದು. ನಾಯಿ ಒಪ್ಪಿಸುವ ಒಂದು ದಿನ ಮುಂಚಿತವಾಗಿ ಸಂಬಂಧಿಸಿದ ಕುಟುಂಬದ ಪುರುಷರು ದೇವಾಲಯದ ಸಮೀಪ ಕಲ್ಲಿನ ಒಲೆ ನಿರ್ಮಿಸಿ ಸೌದೆ ಸಂಗ್ರಹಿಸಿ ಇಡುವರು. ಈ ಕುಟುಂಬದ ಮಹಿಳೆಯರು ದೇವಾಲಯದ ಸಮೀಪ ನಿಗದಿತ ಮನೆಯಲ್ಲಿ ರಾತ್ರಿ ತಂಗಿ ಮುಂಜಾನೆ ತಣ್ಣೀರು ಸ್ನಾನದೊಂದಿಗೆ ಶುದ್ಧದಿಂದ ಅಕ್ಕಿ ಕುಟ್ಟಿ ರೊಟ್ಟಿ ತಯಾರಿಸಿ ನಾಯಿ ಹೊತ್ತು ತರುವ ದಾರಿಯುದ್ದಕ್ಕೂ ತಮ್ಮನ್ನು ಯಾರಿಗೂ ಕಾಣಿಸಿಕೊಳ್ಳದಂತೆ ಬಾಳೆಲೆ ಚೂರಿನೊಂದಿಗೆ ರೊಟ್ಟಿ ಇಡುತ್ತಾರೆ. ಇದು ನಾಯಿಗಳಿಗೆ ನೈವೇದ್ಯ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ತಮ್ಮ ಸಾಕು ಪ್ರಾಣಿಗಳಿಗೆ ತೊಂದರೆಯಾದರೆ, ಮನೆಯಲ್ಲಿ ನಾಯಿಗಳು ಸಮೃದ್ಧಿಯಾಗದಿದ್ದರೆ ಹಾಗೂ ಇಷ್ಟಾರ್ಥ ಸಿದ್ದಿಗೆ ಮಣ್ಣಿನ ನಾಯಿಯ ಹರಕೆ ಹೊತ್ತುಕೊಳ್ಳುತ್ತಾರೆ. ಕೆಲವರು ತೋಟ, ಗದ್ದೆಗೂ ಮಣ್ಣಿನ ನಾಯಿಯ ಹರಕೆ ಮಾಡಿಕೊಳ್ಳುವುದುಂಟು. ಈ ದೇವಾಲಯಕ್ಕೆ ವರ್ಷಂಪ್ರತಿ ನೂರಾರು ನಾಯಿ ಹರಕೆ ಸಲ್ಲಿಸುತ್ತಿದ್ದರೂ ದೇವಳದಲ್ಲಿರುವ ನಾಯಿಯ ಸಂಖ್ಯೆ ಹೆಚ್ಚಾಗದಿರುವುದು ದೇವರ ಮಹಿಮೆ ಎಂಬ ನಂಬಿಕೆ ಇದೆ.* ನಾಳೆಯಿಂದ ಹಬ್ಬ
ಈ ಬಾರಿ 16ರಂದು ಹರಕೆಯ ನಾಯಿ ಒಪ್ಪಿಸುವುದು, 17ರಂದು ಕೊಟ್ಟಿ ಹಾಡುವುದು, 18ರಂದು ರಾತ್ರಿ ದೀಪಾರಾಧನೆ, ತೆರೆ ಹಾಗೂ 19ರಂದು ವಿವಿಧ ಭೂತಾರಾಧನೆ ಹಾಗೂ ಮೇಲೇರಿ ವಾರ್ಷಿಕ ಹಬ್ಬನಡೆಯಲಿದ್ದು ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಸಂಭ್ರಮಿಸುತ್ತಾರೆ.