ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತವು ದೇವರ ಹಬ್ಬವು ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇತಿಹಾಸ ಪ್ರಸಿದ್ಧ ಸತ್ಯ ಸಂಧತೆಯ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತವು ದೇವರ ಹಬ್ಬವು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು.ಉತ್ಸವದ ಅಂಗವಾಗಿ ಸಾಂಪ್ರದಾಯಿಕವಾಗಿ ನಡೆದು ಬಂದಂತೆ ಶ್ರೀ ಶಾಸ್ತವು ಸನ್ನಿಧಿಯಲ್ಲಿ ಡಿ.15 ಸೋಮವಾರ ಭಕ್ತಾದಿಗಳು ಹಾಗೂ ದೇವಾಲಯದ ತಕ್ಕ ಮುಖ್ಯಸ್ಥರು ದೇವರಿಗೆ ಹರಕೆ ರೂಪದಲ್ಲಿ ಮಣ್ಣಿನ ಪ್ರತಿಕೃತಿ ನಾಯಿ ಒಪ್ಪಿಸುವ ಕಾರ್ಯಕ್ರಮದ ಮುಖಾಂತರ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಆನಂತರ ಡಿ. 17ರಂದು ದೇವಾಲಯದ ಆವರಣದಲ್ಲಿ ತಕ್ಕ ಮುಖ್ಯಸ್ಥರು ಸೇರಿ ಕೊಟ್ಟಿ ಹಾಡುವ ಕಾರ್ಯಕ್ರಮ ನಡೆಸಲಾಯಿತು. 18 ಗುರುವಾರ ರಾತ್ರಿ ಅಂಧಿಬೊಳ್‌ಕ್ (ದೀಪಾರಾಧನೆ) ಕಾರ್ಯಕ್ರಮ ನಂತರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ವರೆಗೆ ವಿವಿಧ ದೈವಗಳ ಕೋಲ ನಡೆದು ಬೆಳಗ್ಗೆ ಕಲ್ಯಾಟ ಅಜ್ಜಪ್ಪ ದೈವದ ಕೋಲ ನಡೆಯಿತು. ಮಧ್ಯಾಹ್ನ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿ ನಂತರ ಅಪರಾಹ್ನ ಶ್ರೀ ವಿಷ್ಣೂ ಮೂರ್ತಿ ಮೇಲೇರಿ (ಚೌಂಡಿ ಅಗ್ನಿ ಪ್ರವೇಶ) ದೃಶ್ಯ ಭಕ್ತಾದಿಗಳಲ್ಲಿ ಶ್ರದ್ಧಾ ಭಕ್ತಿ ಇನ್ನಷ್ಟು ಇಮ್ಮಡಿಗೊಂಡು ಭಕ್ತಿ ಪರವಶರಾದರು. ಈ ಸಂದರ್ಭ ಐದಾರು ತಿರೂಳ (ದೇವರ ಆವೇಶ) ಇದ್ದು ಜನರಿಗೆ ಆಶೀರ್ವಾದ ನೀಡುತ್ತಿರುವುದು ಕಂಡು ಬಂತು. ನಂತರ ನೆರದ ಭಕ್ತಾದಿಗಳು ದೈವಕ್ಕೆ ಹರಕೆ ಕಾಣಿಕೆ ಒಪ್ಪಿಸುವ ಕಾರ್ಯಕ್ರಮದೊಂದಿಗೆ ಹಬ್ಬವು ಸಂಪನ್ನಗೊಂಡಿತು. ಉತ್ಸವದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಊರ ಮತ್ತು ಪರವೂರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಮಕ್ಕಿ ಶ್ರೀ ಶಾಸ್ತವು ದೇವರ ಹಬ್ಬದ ವಿಶೇಷತೆ ಎಂದರೆ ಕೊಡಗಿನ ಎಲ್ಲ ದೇವಳದಲ್ಲೂ ವಾರ್ಷಿಕವಾಗಿ ಒಂದು ಉತ್ಸವವಾದರೆ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತವು ದೇವಳದಲ್ಲಿ ಪೂರ್ವ ಪದ್ಧತಿಯಂತೆ ವಾರ್ಷಿಕವಾಗಿ ಎರಡು ಹಬ್ಬಗಳು ಅಂದರೆ ಮೇ ತಿಂಗಳಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ ಜರುಗುತ್ತದೆ.