ಚಿಕ್ಕಮಣ್ಣುಗುಡ್ಡೆ ಕೆಂಪೀಕಟ್ಟೆ ಬಳಿ ಮಕ್ನಾ ಪುಂಡಾನೆ ಸೆರೆ

| Published : Dec 29 2024, 01:20 AM IST

ಸಾರಾಂಶ

ಚನ್ನಪಟ್ಟಣ: ರೈತರಿಗೆ ಉಪಟಳ ನೀಡುತ್ತಿದ್ದ ಮಕ್ನಾ ಆನೆಯನ್ನು ಶನಿವಾರ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್ ಪೋರ್ಸ್ ಸಫಲವಾಗಿದೆ.

ಚನ್ನಪಟ್ಟಣ: ರೈತರಿಗೆ ಉಪಟಳ ನೀಡುತ್ತಿದ್ದ ಮಕ್ನಾ ಆನೆಯನ್ನು ಶನಿವಾರ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್ ಪೋರ್ಸ್ ಸಫಲವಾಗಿದೆ. ಕಾರ್ಯಾಚರಣೆ ಆರಂಭಗೊಂಡ ೮ ದಿನಗಳಲ್ಲೇ ಎರಡು ಪುಂಡಾನೆಗಳನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಆರಂಭಗೊಂಡ ಮೊದಲ ದಿನವೇ ಟಸ್ಕರ್ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದ ಅರಣ್ಯ ಇಲಾಖೆ, ಇದೀಗ ಮಕ್ನಾ ಆನೆ ಸೆರೆಹಿಡಿದಿದೆ.

ಗುರುವಾರದಿಂದಲೇ ಕಾರ್ಯಾಚರಣೆ: ಡಿ.೨೦ರಂದು ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್ ಫೋಸ್ ಅರ್ಧ ದಿನದಲ್ಲೇ ಟಸ್ಕರ್ ಅನ್ನು ಸೆರೆ ಹಿಡಿದು ಮತ್ತೀಗೂಡು ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ. ಪುಂಡಾನೆ ಹಿಡಿದು ಬಿಟ್ಟು ಬರಲು ಹೋಗಿದ್ದ ಪಳಗಿದ ಆನೆಗಳು, ಮರಳಿ ಬಂದ ಗುರುವಾರದಿಂದಲೇ ಮಖ್ನಾ ಆನೆಗಾಗಿ ಕಾರ್ಯಾಚರಣೆ ಕೈಗೊಂಡಿತ್ತು. ಶನಿವಾರ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ಬಳಿ ಪುಂಡಾನೆ ಬೀಡು ಬಿಟ್ಟಿರುವುದನ್ನು ಡ್ರೋಣ್ ಕ್ಯಾಮೆರಾಗಳಿಂದ ಪತ್ತೆ ಹಚ್ಚಲಾಗಿತ್ತು. ಬೆಳಿಗ್ಗೆ ೧೧ ಗಂಟೆಯಲ್ಲಿ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಕೆಂಪೀಕಟ್ಟೆ ಬಳಿ ಬೀಡುಬಿಟ್ಟಿದ್ದ ಆನೆಯನ್ನು ಅರವಳಿಕೆ ಇಂಜೆಕ್ಷನ್‌ನಿಂದ ಶೂಟ್ ಮಾಡಿ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯಲಾಗಿದೆ. ಆನೆ ಒಂದು ಕಡೆ ನಿಲ್ಲದೇ ಹತ್ತಿತ್ತ ಓಡಾಡುತ್ತಿತ್ತು. ಅರಣ್ಯ ಅಧಿಕಾರಿಗಳು ಮತ್ತು ವೈದ್ಯರು ಆನೆ ಇರುವ ಸ್ಥಳವನ್ನು ದೂರದಿಂದಲೇ ವೀಕ್ಷಿಸಿದ್ದರು.

ಅರವಳಿಕೆ ಸಿರಿಂಜ್ ಶೂಟ್:

ಧನಂಜಯ ಆನೆಯ ಮೇಲೆ ಕುಳಿತ ವೈದ್ಯ ರಮೇಶ್ ಸಿಕ್ಕ ತಕ್ಷಣ ಮೊದಲೇ ತುಂಬಿಸಿದ್ದ ಅರವಳಿಕೆ ಇಂಜೆಕ್ಷನ್ ತುಂಬಿದ ಸಿರಂಜ್ ಅನ್ನು ಪುಂಡಾನೆಗೆ ಶೂಟ್ ಮಾಡಿದ್ದಾರೆ. ಆನೆ ಪ್ರಜ್ಞೆ ತಪ್ಪಿರುವುದು ಖಚಿತ ಪಡಿಸಿಕೊಂಡ ವೈದ್ಯರ ತಂಡ, ಆನೆಗೆ ಶುಶ್ರೂಷೆ ಮಾಡಿ, ಆರೋಗ್ಯ ತಪಾಸಣೆ ಮಾಡಿದೆ.ಬಳಿಕ ಸೆಣಬಿನ ಹಗ್ಗದಿಂದ ಕಟ್ಟಿಹಾಕಲಾಗಿದೆ. ಆ ನಂತರ ಆನೆಯ ಮೇಲೆ ನೀರು ಸುರಿದು ಮಂಪರು ಕಡಿಮೆ ಮಾಡಿ ಪಳಗಿದ ಆನೆಗಳ ಸಹಾಯದಿಂದ ಸಲಗವನ್ನು ಲಾರಿ ಹತ್ತಿರಕ್ಕೆ ಕರೆತಂದಿದ್ದಾರೆ.

ಈ ವೇಳೆ ಪುಂಡಾನೆ ಒಂದಷ್ಟು ಪ್ರತಿರೋಧ ತೋರಿದರೂ ಪಳಗಿದ ಆನೆಗಳು ಪುಂಡಾನೆಯನ್ನು ಸೊಂಡಲಿನಿಂದ ಸವರುತ್ತಾ, ದಂತದಿಂದ ತಿವಿಯುತ್ತಾ ಮುನ್ನಡೆಸಿಕೊಂಡು ಬಂದು, ಕ್ರೇನ್‌ ಸಹಾಯದಿಂದ ಲಾರಿಗೆ ಹತ್ತಿಸಿ ಸ್ಥಳಾಂತರಿಸಲಾಗಿದೆ.

೩೫ ವರ್ಷದ ಮಕ್ನಾ:

ಇದೀಗ ಸೆರೆ ಸಿಕ್ಕಿರುವ ೩೫ ವರ್ಷದ ಮಕ್ನಾ ಪುಂಡಾನೆಯ ಹಾವಳಿ ಕಳೆದ ವರ್ಷ ಹೆಚ್ಚಾದಾಗಲೂ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿದ್ದರು. ಆದರೆ, ಅಲ್ಲಿಂದ ಮರಳಿ ತನ್ನ ಸ್ಥಾವರ ಹುಡುಕಿಕೊಂಡು ಬಂದಿದ್ದ ಆನೆ ಮತ್ತೆ ಚಾಳಿ ಮುಂದುವರಿಸಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಮತ್ತೆ ಸೆರೆಹಿಡಿಯಲಾಗಿದೆ.

೬ ಪಳಗಿದ ಆನೆ ಬಳಕೆ:

ಡಿಎಫ್‌ಒ ರಾಮಕೃಷ್ಣಯ್ಯ, ಆರ್‌ಎಫ್‌ಒ ಮಲ್ಲೇಶ್ ನೇತೃತ್ವದಲ್ಲಿ ನಡೆದ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಆರು ಸಾಕಾನೆ, ಇಬ್ಬರು ಪಶು ವೈಧ್ಯಾಕಾರಿಗಳು, ಎಲಿಫೆಂಟ್ ಟಾಸ್ಕ್ ಫೊರ್ಸ್ ತಂಡ, ೭೦ ಸಿಬ್ಬಂದಿ, ಹಾಗೂ ಜಿಲ್ಲಾಮಟ್ಟದ ಅರಣ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಇನ್ನು ಆನೆ ಸೆರೆ ಕಾರ್ಯಾಚರಣೆಯಲ್ಲಿ ಪಳಗಿದ ಆನೆಗಳಾದ ಏಕಲವ್ಯ, ಭೀಮ ಧನಂಜಯ, ಪ್ರಶಾಂತ್, ಹರ್ಷ, ಸುಗ್ರೀವ ಆನೆಗಳನ್ನು ಬಳಸಿಕೊಳ್ಳಲಾಗಿತ್ತು.

ಮಹೇಂದ್ರನ ಬದಲು ಏಕಲವ್ಯ:

ಕಳೆದ ಶುಕ್ರವಾರ ಆರಂಭಗೊಂಡಿದ್ದ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಹೇಂದ್ರ ಪಳಗಿದ ಆನೆಯ ಬದಲು ಈ ಬಾರಿ ಏಕಲವ್ಯ ಆನೆಯನ್ನು ಬಳಸಿಕೊಳ್ಳಲಾಗಿತ್ತು. ಟಸ್ಕರ್ ಆನೆಯನ್ನು ಯಶಸ್ವಿಯಾಗಿ ಸೆರೆಹಿಡಿದು ಸ್ಥಳಾಂತರ ಮಾಡಿದ ನಂತರ ಮಹೇಂದ್ರ ಆನೆಗೆ ಮದವೇರಿದ ಹಿನ್ನೆಲೆಯಲ್ಲಿ ಅದನ್ನು ಅಲ್ಲೇ ಬಿಟ್ಟು ಅದರ ಬದಲು ಏಕಲವ್ಯ ಆನೆಯನ್ನು ಕರೆತರಲಾಗಿತ್ತು. ಭೀಮನೊಂದಿಗೆ ಏಕಲವ್ಯ ಪುಂಡಾನೆ ಸೆರೆ ಕಾರ್ಯಾಚರಣೆಯ ಮುಂದಾಳತ್ವ ವಹಿಸಿತ್ತು.

ಬಾಕ್ಸ್................

ಮತ್ತೀಗೂಡು, ದುಬಾರೆ ಶಿಬಿರಕ್ಕೆ ಸ್ಥಳಾಂತರ

ಈ ಬಾರಿ ಸೆರೆಸಿಕ್ಕ ಪುಂಡಾನೆಗಳನ್ನು ಬೇರೆ ಕಡೆ ಸ್ಥಳಾಂತರಿಸದೇ ಆನೆ ಶಿಬಿರದಲ್ಲಿ ಉಳಿಸಿಕೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ. ಇದೀಗ ಸೆರೆಸಿಕ್ಕಿರುವ ಮಕ್ನಾ ಆನೆಯನ್ನು ಅರಣ್ಯ ಇಲಾಖೆ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಿದೆ. ಅಂತೆಯೇ ಕಳೆದ ವಾರ ಸೆರೆ ಸಿಕ್ಕ ಟಸ್ಕರ್ ಅನ್ನು ಮತ್ತೀಗೂಡು ಆನೆ ಶಿಬಿರದಲ್ಲಿ ಇರಿಸಲಾಗಿದೆ.

೨೦೨೨ ಹಾಗೂ ೨೦೨೩ರಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ೨೦೨೨ರಲ್ಲಿ ಮಖ್ನಾ ಹಾಗೂ ೨೦೨೩ರಲ್ಲಿ ಟಸ್ಕರ್ ಅನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಲಾಗಿತ್ತು. ಆದರೆ, ಸ್ಥಳಾಂತರಿಸಿದ ಕೆಲ ತಿಂಗಳಲ್ಲಿ ಮತ್ತೆ ಮರಳಿದ್ದವು. ಸ್ಥಳಾಂತರಿಸುವ ವೇಳೆ ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಸಿದ್ದರಿಂದ ಪುಂಡಾನೆಗಳು ಮರಳಿ ಬಂದಿರುವುದು ಖಚಿತವಾಗಿತ್ತು. ಆದ್ದರಿಂದ ಈ ಬಾರಿ ಸ್ಥಳಾಂತರಿಸದೆ ಶಿಬಿರದಲ್ಲೇ ಉಳಿಸಿಕೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಕೋಟ್...................

ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶ ಕೆಂಪೀಕಟ್ಟೆ ಬಳಿ ಮಕ್ನಾ ಆನೆಯನ್ನು ಸೆರೆಹಿಡಿಯಲಾಗಿದೆ. ಸೆರೆ ಹಿಡಿದ ಪುಂಡಾನೆಯನ್ನು ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗುವುದು.

-ಮಲ್ಲೇಶ್, ಆರ್‌ಎಫ್‌ಒ, ಚನ್ನಪಟ್ಟಣ

ಕೋಟ್..............

ರೈತರಿಗೆ ಉಪಟಳ ನೀಡುತ್ತಿದ್ದ 4 ಪುಂಡಾನೆಗಳ ಪೈಕಿ ಎರಡನ್ನು ಸೆರೆಹಿಡಿಯಲಾಗಿದೆ. ಎರಡಕ್ಕೆ ಮಾತ್ರ ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಇನ್ನೆರಡು ಆನೆಗಳ ಸೆರೆಗೆ ಅನುಮತಿ ಪಡೆಯಲಾಗುವುದು.

-ಸಿ.ಪಿ.ಯೋಗೇಶ್ವರ್, ಶಾಸಕರು, ಚನ್ನಪಟ್ಟಣ

ಪೋಟೊ ೨೮ಸಿಪಿಟಿ೧,೨

ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಮಕ್ನಾ ಆನೆಯನ್ನು ಪಳಗಿದ ಆನೆಗಳ ಸಹಾಯದಿಂದ ಕರೆತರಲಾಯಿತು.