ಮಳವಳ್ಳಿ ಪಟ್ಟಣದ ಪಾದಚಾರಿಗೆ ಓಡಾಡಲು ಫುಟ್ ಪಾತ್ ಇಲ್ಲವಾಗಿದೆ. ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಂದ ಪಾದಚಾರಿಗಳಿಗೆ ಮೈಸೂರು- ಕೊಳ್ಳೇಗಾಲ- ಮದ್ದೂರು ಸಂಪರ್ಕ ರಸ್ತೆಯಲ್ಲಿ ಅನೇಕ ಅಪಘಾತಗಳಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿಯನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪಟ್ಟಲದಮ್ಮನ ದೇವಸ್ಥಾನದ ಬಳಿ ಗುರುವಾರ ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಹಾಗೂ ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್ ಅವರನ್ನು ವೇದಿಕೆ ತಾಲೂಕು ಅಧ್ಯಕ್ಷ ಎಚ್.ಇ.ಅಪ್ಪೇಗೌಡ ನೇತೃತ್ವದಲ್ಲಿ ಭೇಟಿ ಮಾಡಿದ ಕಾರ್ಯಕರ್ತರು ತ್ವರಿತವಾಗಿ ಕ್ರಮ ವಹಿಸುವಂತೆ ಆಗ್ರಹಿಸಿದರು.ಈ ವೇಳೆ ಎಚ್.ಇ.ಅಪ್ಪೇಗೌಡ ಮಾತನಾಡಿ, ಪಟ್ಟಣದ ಪಾದಚಾರಿಗೆ ಓಡಾಡಲು ಫುಟ್ ಪಾತ್ ಇಲ್ಲವಾಗಿದೆ. ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಂದ ಪಾದಚಾರಿಗಳಿಗೆ ಮೈಸೂರು- ಕೊಳ್ಳೇಗಾಲ- ಮದ್ದೂರು ಸಂಪರ್ಕ ರಸ್ತೆಯಲ್ಲಿ ಅನೇಕ ಅಪಘಾತಗಳಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ರಸ್ತೆಯ ಎಸ್‌ಬಿಐ ಬ್ಯಾಂಕ್, ಹೋಟೆಲ್, ಪೆಟ್ರೋಲ್ ಬಂಕ್, ರೋಟರಿ ಶಾಲೆ, ಅನಿತಾ ಕಾನ್ವೆಂಟ್ ರಸ್ತೆಗಳಲ್ಲಿ ಪಾದಚಾರಿಗಳು ಸಂಚರಿಸಲು ಫುಟ್ ಪಾತ್ ಅನ್ನು ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಿ ಜನರು ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಮಳವಳ್ಳಿ ಪಟ್ಟಣದಲ್ಲಿ ವಾಹನದ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದರಲ್ಲೂ ಸರ್ಕಾರಿ ರಜಾ ದಿನಗಳು, 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರಗಳೂ ಅತಿಯಾದ ವಾಹನ ಸಂಚಾರದಿಂದ ಪಾದಚಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ತ್ವರಿತವಾಗಿ ಕ್ರಮವಹಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಎಚ್.ಇ.ವಿಜಯಾ, ಪ್ರಮುಖರಾದ ವಿ.ವೆಂಕಟೇಶ್, ವಿ.ಪ್ರಕಾಶ್, ಎನ್.ಮಲ್ಲಿಕಾರ್ಜುನ್, ಶಿವಕುಮಾರ್, ಕೆ.ಟಿ.ಭೀಮ, ಮಾದೇಶ್, ನಾಗೇಶ್, ವೆಂಕಟೇಶ್, ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಂಡಿದ್ದರು.ಎಚ್.ಡಿ.ಕುಮಾರಸ್ವಾಮಿಗೆ ಅಭಿನಂದನೆ
ಮಂಡ್ಯ: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ತಾಲೂಕಿನ ಹೊಳಲು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಎಚ್.ಪಿ.ಸಚ್ಚಿದಾನಂದ (ಪಪ್ಪಿ) ಹಾಗೂ ಗ್ರಾಮಸ್ಥರು ಅಭಿನಂದಿಸಿದರು. ಈ ವೇಳೆ ಎಚ್.ಎಸ್.ಆನಂದ್, ಎಚ್.ಸಿ.ಶ್ರೀಧರ್, ಪ್ರದೀಪ್ ಕುಮಾರ್, ಮಾತೃ ಶಂಕರ್ ಹಾಗೂ ಇತರರು ಇದ್ದರು.