ಮಳವಳ್ಳಿ ಭೂ ದಾಖಲೆಗಳ ‘ನಕಲಿ’ ಕೇಂದ್ರ: ಶಾಸಕ ನರೇಂದ್ರಸ್ವಾಮಿ

| Published : Aug 03 2025, 01:30 AM IST

ಮಳವಳ್ಳಿ ಭೂ ದಾಖಲೆಗಳ ‘ನಕಲಿ’ ಕೇಂದ್ರ: ಶಾಸಕ ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಶಾಸಕನಾದ ನಂತರದಲ್ಲಿ ೨೫೦೦ ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿರುವುದಾಗಿ ಆರೋಪಿಸಿದ್ದೆ. ಅದು ರಾಜ್ಯ ಮಟ್ಟದ ಸಮಿತಿಯಿಂದ ತನಿಖೆಯಾಗಿ ೮೦೦ ಎಕರೆ ಅಕ್ರಮವಾಗಿ ಪರಭಾರೆಯಾಗಿರುವುದು ಸಾಬೀತಾಗಿದೆ. ಆ ತನಿಖೆ ಈಗಲೂ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ನಕಲಿ ಭೂ ದಾಖಲೆಗಳ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಉಪ ನೋಂದಣಾಧಿಕಾರಿ ಕಚೇರಿ, ತಾಲೂಕು ಕಚೇರಿ, ಸೈಬರ್ ಕೇಂದ್ರಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಇದರ ಹಿಂದೆ ದೊಡ್ಡ ನೆಟ್‌ವರ್ಕ್ ಕೆಲಸ ಮಾಡುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗಂಭೀರವಾಗಿ ಆರೋಪಿಸಿದರು.

ಶನಿವಾರ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಡಿಗುಂಡುಗಳಂತೆ ಮಾತುಗಳನ್ನು ಸಿಡಿಸಿದರು.

ನಾನು ಶಾಸಕನಾದ ನಂತರದಲ್ಲಿ ೨೫೦೦ ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿರುವುದಾಗಿ ಆರೋಪಿಸಿದ್ದೆ. ಅದು ರಾಜ್ಯ ಮಟ್ಟದ ಸಮಿತಿಯಿಂದ ತನಿಖೆಯಾಗಿ ೮೦೦ ಎಕರೆ ಅಕ್ರಮವಾಗಿ ಪರಭಾರೆಯಾಗಿರುವುದು ಸಾಬೀತಾಗಿದೆ. ಆ ತನಿಖೆ ಈಗಲೂ ಮುಂದುವರೆದಿದೆ ಎಂದರು.

ಈ ಭೂ ಹಗರಣವನ್ನು ಬೆಳಕಿಗೆ ತಂದ ಬಳಿಕ ನನಗೆ ಭೂಗಳ್ಳರಿಂದ ಜೀವಬೆದರಿಕೆ ಕರೆಗಳು ಬರುತ್ತಿವೆ. ಆದರೂ ನಾನು ಅದಕ್ಕೆ ಹೆದರುವುದಿಲ್ಲ. ಅವರನ್ನು ಎದುರಿಸುವಷ್ಟು ಶಕ್ತಿ ನನಗಿದೆ. ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡುವುದು ನನ್ನ ಮೊದಲ ಆದ್ಯತೆ ನೀಡುವೆ. ಇದುವರೆಗೂ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳಲಾದ ಜಮೀನುಗಳಿಂದ ಅವರನ್ನು ತೆರವುಗೊಳಿಸಿಲ್ಲವೇಕೆ ಎಂದು ಪ್ರಶ್ನಿಸಿದರು.

ಇದಕ್ಕೆ ಜಿಲ್ಲಾಧಿಕಾರಿಗಳು ಉತ್ತರಿಸಿ, ರಾಜ್ಯ ಸಮಿತಿ ವರದಿ ಆಧಾರದ ಮೇಲೆ ನಕಲಿ ಭೂ ದಾಖಲೆ ಸೃಷ್ಟಿಸಿದವರ ಮೇಲೆ ಎಫ್‌ಐಆರ್ ದಾಖಲಿಸಿದ್ದೇವೆ. ಚಾರ್ಜ್‌ಶೀಟ್ ಹಾಕಿದ್ದೇವೆ. ಅವರಿಗೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ. ತೆರವುಗೊಳಿಸಿದ ಜಮೀನುಗಳಿಗೆ ೧ ಸಾವಿರ ಆರ್‌ಟಿಸಿಗಳಿಗೆ ಸರ್ಕಾರ ಎಂದು ಕೂರಿಸಲಾಗಿದೆ. ಆದರೆ, ವಶಪಡಿಸಿಕೊಂಡ ಜಮೀನುಗಳಲ್ಲಿರುವವರಿಗೆ ನೋಟಿಸ್ ನೀಡಿ ಕಾನೂನುಬದ್ಧವಾಗಿ ತೆರವುಗೊಳಿಸಬೇಕು. ಏಕಾಏಕಿ ತೆರವಿಗೆ ಹೋದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಸಾಧ್ಯತೆಗಳಿವೆ. ಆಗ ಕೆಲಸಕ್ಕೆ ಅಡಚಣೆಯಾಗಲಿದೆ ಎಂದರು.

ಆ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಡಿಸೆಂಬರ್ ಒಳಗೆ ತೆರವುಗೊಳಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ದಾಖಲೆ ಪರಿಶೀಲಿಸಿ:

ಖಾಸಗಿ ವ್ಯಕ್ತಿಯೊಬ್ಬರಿಗೆ ಆರು ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ ಎರಡು ಎಕರೆ ಸರ್ಕಾರಿ ಇನಾಂ ಜಮೀನು ಉಳಿದ ನಾಲ್ಕು ಎಕರೆ ಕ್ರಯ ಎಂದಿದೆ. ಒಂದೇ ಸರ್ವೇ ನಂಬರ್‌ನಲ್ಲಿ ಆ ಜಮೀನಿದ್ದು ಎರಡು ಎಕರೆ ಮಾತ್ರ ಇನಾಂ ಜಮೀನು ಬರುವುದಕ್ಕೆ ಹೇಗೆ ಸಾಧ್ಯ. ಎರಡು ಎಕರೆಯನ್ನು ವಶಕ್ಕೆ ಪಡೆದು ಉಳಿದ ನಾಲ್ಕು ಎಕರೆಯನ್ನು ಬಿಟ್ಟಿರುವುದೇಕೆ. ಇನಾಂ ಕೊಡಬೇಕಾದರೆ ಅದು ಹಿಂದೆ ಸರ್ಕಾರಿ ಜಮೀನಾಗಿರಬೇಕು. ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ನರೇಂದ್ರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹಾಸ್ಟೆಲ್‌ಗಳಿಗೆ ತಿಂಗಳ ಕೊನೆಗೆ ಆಹಾರ ಪದಾರ್ಥಗಳ ಪೂರೈಕೆ:

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್‌ಗಳಿಗೆ ಪ್ರತಿ ತಿಂಗಳ ಕೊನೆಯ ವಾರ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಇದಕ್ಕೆ ಕಾರಣವೇನು ಎಂದು ನರೇಂದ್ರಸ್ವಾಮಿ ಪ್ರಶ್ನಿಸಿದಾಗ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್, ನಾವು ತಿಂಗಳ ಕೊನೆಯ ವಾರವೇ ಬೇಡಿಕೆ ಇರುವಷ್ಟು ಆಹಾರ ಪದಾರ್ಥಗಳಿಗೆ ಪ್ರಸ್ತಾವನೆ ಸಲ್ಲಿಸಿ ಪ್ರತಿ ತಿಂಗಳು ಐದನೇ ತಾರೀಖಿನ ಒಳಗೆ ಅವರ ಹಾಸ್ಟೆಲ್‌ಗಳಿಗೆ ತಲುಪುವಂತೆ ಮಾಡುತ್ತಿದ್ದೇವೆ ಎಂದರು.

ಸುಳ್ಳು ಹೇಳಬೇಡಿ. ನಾನೇ ಹಾಸ್ಟೆಲ್‌ಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇನೆ. ತಿಂಗಳ ಕೊನೆಗೆ ಆಹಾರ ಪದಾರ್ಥಗಳು ತಲುಪುತ್ತಿದೆ. ಉಳಿದ ೨೫ ದಿನದ ಅಡುಗೆ ತಯಾರಿಕೆಗೆ ಆಹಾರ ಪದಾರ್ಥಗಳು ಎಲ್ಲಿಂದ ಬರುತ್ತಿವೆ. ಇದರ ಹಿಂದೆ ಯಾರೆಲ್ಲಾ ಇದ್ದೀರಿ ಎಂದು ಹೇಳಲಾ ಎಂದು ಗುಡುಗಿದರು.

ಅಪ್ಪ-ಅಮ್ಮ, ಮನೆ ಬಿಟ್ಟು ಹಾಸ್ಟೆಲ್‌ಗೆ ಓದಲು ಬಂದಿರುವ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡುತ್ತಿದ್ದೀರಾ. ಯಾರು ಏಜೆನ್ಸಿ ಪಡೆದಿರುವವನೋ ಅವನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ತಾಕೀತು ಮಾಡಿದರು.

ಕೊನೆ ಭಾಗಕ್ಕೆ ನೀರಿಲ್ಲ:

ಕೆಆರ್‌ಎಸ್ ಭರ್ತಿಯಾಗಿ ಒಂದೂವರೆ ತಿಂಗಳಾದರೂ ಕೊನೆಯ ಭಾಗಕ್ಕೆ ಇನ್ನೂ ನೀರು ಬಂದಿಲ್ಲ. ಕೆರೆ-ಕಟ್ಟೆಗಳು ತುಂಬಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದೇ ಈ ಅವಾಂತರಕ್ಕೆ ಕಾರಣ. ಮೊದಲೇ ಕ್ರಮಬದ್ಧವಾಗಿ ಯೋಜನೆ ರೂಪಿಸಿಕೊಂಡಿದ್ದರೆ ಇಷ್ಟೊತ್ತಿಗೆ ಮದ್ದೂರು, ಮಳವಳ್ಳಿ ಕೊನೆಯ ಭಾಗಕ್ಕೆ ನೀರು ಹರಿಸಿ ಕೃಷಿ ಮತ್ತು ಕೆರೆ-ಕಟ್ಟೆಗಳನ್ನು ತುಂಬಿಸಬಹುದಿತ್ತು ಎಂದರು.