ಕಳೆದ ಹಲವು ವರ್ಷಗಳಿಂದ ತಾಲೂಕು ಆಡಳಿತದಿಂದ ಆಯೋಜಿಸುತ್ತಿರುವ ಜಯಂತಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ತಾಲ್ಲೂಕು ಆಡಳಿತ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗೋಣ. ಈ ಬಾರಿ ಅದ್ಧೂರಿಯಾಗಿ ಕೆಂಪೇಗೌಡರ ಜಯಂತಿ ಆಚರಿಸಲು ಎಲ್ಲರೂ ಮುಂದಾಗೋಣ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂ.26ರಂದು ಜಾತ್ಯತೀತ ಮತ್ತು ಪಕ್ಷಾತೀಯವಾಗಿ ಸಂಭ್ರಮದಿಂದ ಎಲ್ಲಾ ಸಮುದಾಯದವರು ಸೇರಿ ಆಚರಿಸಲು ಕೈಜೋಡಿಸಬೇಕು ಎಂದು ಒಕ್ಕಲಿಗರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಪಿ.ನಾಗೇಶ್ ಮನವಿ ಮಾಡಿದರು.

ಪಟ್ಟಣದ ಮೈಸೂರು ರಸ್ತೆಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಮಂಗಳವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ತಾಲೂಕು ಆಡಳಿತದಿಂದ ಆಯೋಜಿಸುತ್ತಿರುವ ಜಯಂತಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ತಾಲ್ಲೂಕು ಆಡಳಿತ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗೋಣ. ಈ ಬಾರಿ ಅದ್ಧೂರಿಯಾಗಿ ಕೆಂಪೇಗೌಡರ ಜಯಂತಿ ಆಚರಿಸಲು ಎಲ್ಲರೂ ಮುಂದಾಗೋಣ ಎಂದರು.

ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯಕ್ಕೂ ಉದ್ಯೋಗಕ್ಕೆ ಅನುಗುಣವಾಗಿ ಮಾರುಕಟ್ಟೆಯನ್ನು ಕಲ್ಪಿಸಿರುವುದು ಇತಿಹಾಸದಲ್ಲಿಯೇ ಮಾದರಿಯಾಗಿದೆ. ನಾಡಪ್ರಭು ಅವರನ್ನು ಒಂದು ಜಾತಿಗೆ ಸಿಮೀತಗೊಳಿಸದೇ ಅದ್ಧೂರಿಯಾಗಿ ಆಚರಿಸಲು ಹೆಚ್ಚಿನ ಪ್ರಚಾರ ಕೈಗೊಂಡು ಯಶಸ್ವಿಗೆ ಶ್ರಮಿಸಬೇಕೆಂದು ಹೇಳಿದರು.

ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಎ.ಬಿ.ಬಸವರಾಜು, ಕಾರ್ಯದರ್ಶಿ ದೇವರಾಜು, ಖಜಾಂಚಿ ಮಾದೇಶ್, ನಿರ್ದೇಶಕರಾದ ಟಿ.ಸಿ.ಚೌಡಯ್ಯ, ಎಚ್.ಬಿ.ಬಸವೇಶ್, ರಮೇಶ್, ಜಯಮ್ಮ, ಬಿ.ಎಂ.ಪ್ರಕಾಶ್, ಎಂ.ಎಲ್.ರುದ್ರಸ್ವಾಮಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಸೇರಿದಂತೆ ಇತರರು ಇದ್ದರು.ಬೆಳೆಗಳ ರಕ್ಷಣೆಗೆ ನೀರು ಹರಿಸಿ: ದೀಪುಪಾಂಡವಪುರ: ಕೆ.ಆರ್.ಎಸ್ ಜಲಾಶಯದ ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದಿರುವ ಕಬ್ಬು ನೀರಿಲ್ಲದೆ ಒಣಗುತ್ತಿದೆ. ಹೀಗಾಗಿ ಕೆಆರ್‌ಎಸ್ ಜಲಾಶಯದಿಂದ ಒಂದು ಕಟ್ಟು ನೀರು ಬಿಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಎನ್.ದಿಲೀಪ್ (ದೀಪು) ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳೆದು ನಿಂತಿರುವ ಕಬ್ಬಿಗೆ ಒಂದರಿಂದ ಎರಡು ಕಟ್ಟು ನೀರು ಬೇಕಾಗಿದೆ. ಕಬ್ಬಿನ ಬೆಳೆಗೆ ಕೆಆರ್‌ಎಸ್‌ನಿಂದ ನೀರು ಬಿಡದಿದ್ದರೆ ಇಡೀ ವರ್ಷ ಕಷ್ಟಪಟ್ಟು ಬೆಳೆದಿರುವ ಕಬ್ಬು ರೈತರ ಕೈಗೆ ಸಿಗುವುದಿಲ್ಲ. ಹೀಗಾಗಿ ಕಬ್ಬು ಬೆಳೆಗಾರರ ಸಂಕಷ್ಟ ಅರ್ಥಮಾಡಿಕೊಂಡು ಶಾಸಕರು, ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿಸುವ ಬಗ್ಗೆ ಈ ಕೂಡಲೇ ಸೂಕ್ತ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.