ತಾಲೂಕಿನ ನಂಜೇದೇವನಪುರ ಗ್ರಾಮದ ಬಳಿಯ ಜಮೀನೊಂದರಲ್ಲಿ ಕಾಣಿಸಿಕೊಂಡಿರುವ ೫ ಹುಲಿಗಳ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ನಂಜೇದೇವನಪುರ ಗ್ರಾಮದ ಬಳಿಯ ಜಮೀನೊಂದರಲ್ಲಿ ಕಾಣಿಸಿಕೊಂಡಿರುವ ೫ ಹುಲಿಗಳ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಕಳೆದ ಕೆಲ ತಿಂಗಳ ಹಿಂದೆ ಕಲ್ಪುರ ಭಾಗದಲ್ಲಿ ಕಾಣಿಸಿಕೊಂಡಿದ್ದ ಗಂಡು ಹುಲಿಯನ್ನು ನಂಜೇದೇವನಪುರದ ಬಳಿ ಇರುವ ಉಡೀಗಾಲದ ಬುಲೆಟ್ ನಾಗಪ್ಪರ ಜಮೀನಿನ ಹತ್ತಿರದ ಪೊದೆಯಲ್ಲಿ ಮಂಗಳವಾರ ರಾತ್ರಿ ಸೆರೆ ಹಿಡಿಯಲಾಗಿದೆ.ಡಿ.೨೦ರಂದು ನಂಜೇದೇವನಪುರ ಗ್ರಾಮದ ಪ್ರಶಾಂತ್ ಎಂಬುವರ ತೋಟದಲ್ಲಿ ಇದ್ದ ಸಿಸಿ ಕ್ಯಾಮೆರಾದಲ್ಲಿ ಒಂದು ತಾಯಿ ಹುಲಿ ಮತ್ತು ೪ ಮರಿ ಹುಲಿಗಳು ಪತ್ತೆಯಾಗಿದ್ದವು. ಅಂದಿನಿಂದ ಅರಣ್ಯಾಧಿಕಾರಿಗಳು ಮೊಕ್ಕಾಂ ಹೂಡಿ, ಸೆರೆಗೆ ಆನೆಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈಗ ಸೆರೆ ಸಿಕ್ಕಿರುವ ಹುಲಿ ಗಂಡು ಹುಲಿಯಾಗಿದೆ. ಡ್ರೋನ್ ಕ್ಯಾಮಾರದಲ್ಲಿ ಈ ಹುಲಿ ಇರುವುದು ತಿಳಿದ ತಕ್ಷಣ ಕಾರ್ಯಪ್ರವೃತ್ತದರಾದ ೧೦೦ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಂಗಳವಾರ ರಾತ್ರಿ ಐದು ಆನೆಗಳ ಮೂಲಕ ಕಾರ್ಯಾಚರಣೆ ನಡೆಸಿ ಹುಲಿಗೆ ಅರವಳಿಕೆ ಇಂಜೆಕ್ಷನ್ ನೀಡಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.ಸುಮಾರು ಆರು ವರ್ಷದ ಈ ಹುಲಿಗೆ ಪಶು ವೈದ್ಯ ಡಾ. ಆದರ್ಶ್ ಅವರು ಅರವಳಿಕೆ ಚುಚ್ಚು ಮದ್ದು ಶೂಟ್ ಮಾಡಿದರು. ಬಿ ಆರ್‌ಟಿ ಡಿಸಿಎಫ್ ಶ್ರೀಪತಿ, ಎಸಿಎಫ್ ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ಕಲ್ಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಆರ್‌ಟಿ ಚಾಮರಾಜನಗರ, ಬಫರ್ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳ ಸೆರೆಗಾಗಿ ಆನೆಗಳ ಕೂಬಿಂಗ್ ಮತ್ತು ವಾಕ್ ಗ್ರೂ ಕೇಜ್ ಅಳವಡಿಸಿ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಯಾವುದೇ ಹುಲಿ ಸೆರೆಯಾಗಿರಲಿಲ್ಲ
ಈಗ ಸೆರೆ ಸಿಕ್ಕಿರುವ ಹುಲಿ ಕಲ್ಪುರ ಮತ್ತಿತರ ಕಡೆ ಸಂಚರಿಸುತ್ತಿದ್ದ ಹುಲಿ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ತಾಯಿ ಮತ್ತು ೪ ಮರಿ ಹುಲಿಗಳ ಸೆರೆಗಾಗಿ ಕಾರ್ಯಾಚರಣೆ ಸ್ಧಗಿತಗೊಂಡಿದ್ದು, ಜನರ ಆತಂಕ ಮುಂದುವರಿದೆ. ಬಿಟ್ಟು, ೫ ಹುಲಿಗಳ ಸರೆಗೆ ಪ್ರಾರ್ಥನೆ ಮಾಡುವುದರ ಜೊತೆಗೆ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಂಜೇದೇವನಪುರ, ವೀರನಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರನ್ನು ಜಮೀನುಗಳಿಗೆ ಹೋಗದಂತೆ ಸೂಚನೆ ನೀಡಲಾಗಿದ್ದು ನಿಷೇಧಾಜ್ಞೆಯನ್ನು ಜ. ೪ರವರೆಗೂ ಜಾರಿಗೊಳಿಸಲಾಗಿದೆ. ಹುಲಿಗಳ ಸೆರೆಗಾಗಿ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಅರಣ್ಯಾಧಿಕಾರಿಳಿಂದ ಸಲಹೆ ಸೂಚನೆಗಳನ್ನು ಪಡೆದು, ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಮ್ಮ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿರುವ ೫ ಹುಲಿಗಳ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಇವರಿಗೆ ಸ್ಥಳೀಯ ಶಾಸಕರ ಮುತುವರ್ಜಿಯಿಂದಾಗಿ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಹುಲಿಗಳನ್ನು ಸೆರೆ ಹಿಡಿದು ಜನರ ಆತಂಕ ದೂರವಾಗಬೇಕೆನ್ನುವುದೇ ನಮ್ಮ ಆಶಯ, ಇದಕ್ಕಾಗಿ ಈ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತೇವೆ.ಜಿ. ಕುಮಾರಸ್ವಾಮಿ,ನಂಜೇದೇವನಪುರ