- ಸ್ಥಳಕ್ಕೆ ಹರಿಹರ ಶಾಸಕ ಬಿ.ಪಿ.ಹರೀಶ್ ಭೇಟಿ । ಸಮಸ್ಯೆ ಚರ್ಚೆಗೆ ಸಭೆ ಕರೆಯಲು ಸೂಚನೆ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ರೈತ ಸಂಘದ ಮುಖಂಡರು ಮಲೇಬೆನ್ನೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದರು.ರೈತ ಸಂಘದ ಮುಖಂಡ ಹಾಳೂರು ನಾಗರಾಜ್ ಮಾತನಾಡಿ, ಸರ್ಕಾರದ ಈ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಔಷಧಿಯನ್ನು ಬೇರೆಡೆ ತರುವಂತೆ ಚೀಟಿ ಬರೆದು ಕೊಡುತ್ತಾರೆ. ನರ್ಸ್‌ಗಳು ರೋಗಿಗಳನ್ನು ಸೂಕ್ತ ರೀತಿಯಲ್ಲಿ ಶುಷ್ರೂಷೆ ಮಾಡುತ್ತಿಲ್ಲ. ಆಸ್ಪತ್ರೆಯ ಸಿಬ್ಬಂದಿಗೆ ವೈದ್ಯರ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಹಾಲಿವಾಣ ಗ್ರಾಮದ ಮಲೇರಿಯಾ ಕಾರ್ಯಕರ್ತರು ನಾಲ್ಕು ವರ್ಷದಿಂದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಿಯೋಜನೆಯಲ್ಲಿದ್ದಾರೆ. ಕ್ಷ-ಕಿರಣ ಯಂತ್ರ ಹಾಳಾಗಿದ್ದು, ರೋಗಿಗಳು ದಾವಣಗೆರೆ, ಹರಿಹರ ನಗರಗಳಿಗೆ ತೆರಳಿ ಕ್ಷ-ಕಿರಣ ಮಾಡಿಕೊಂಡು ಬರುವಂತಾಗಿದೆ. ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಕಲುಷಿತ ನದಿ ನೀರಿನಿಂದ ಜನರಿಗೆ ಮೈ ಕಡಿತ ಶುರುವಾಗಿದೆ. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಇತ್ತ ಗಮನಹರಿಸುತ್ತಿಲ್ಲ. ಸಿಬ್ಬಂದಿ ಯಾವಾಗಲೋ ಕರ್ತವ್ಯಕ್ಕೆ ಬರ್ತಾರೆ, ಹೋಗ್ತಾರೆ. ಆಸ್ಪತ್ರೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿಯಿತ್ತ ತಾಲೂಕು ಉಸ್ತುವಾರಿ ಅಧಿಕಾರಿ ಡಾ.ಮುರಳೀಧರ್ ಮಾತನಾಡಿ, ಮಲೇರಿಯಾ ಅಧಿಕಾರಿ ನಿಯೋಜನೆ ನಾಳೆಯೇ ರದ್ದುಪಡಿಸಲಾಗುವುದು. ಆಸ್ಪತ್ರೆಯ ಕುಂದುಕೊರತೆ ನಿವಾರಿಸಲು ಶೀಘ್ರವೇ ನಾಗರೀಕರ ಸಭೆ ನಡೆಸಲು ತಾಲೂಕು ಇಒ ಬಸವರಾಜ್ ಅವರಿಗೆ ತಿಳಿಸಲಾಗುತ್ತದೆ. ಸೂಕ್ತ ದಾಖಲೆ ಒದಗಿಸಲು ಕಾಲಾವಕಾಶ ಅಗತ್ಯವಿದೆ ಎಂದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಪಿ. ಹರೀಶ್ ತಾಲೂಕು ಅಧಿಕಾರಿ ಬಸವರಾಜ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಮೇ ೧೬ರಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಭೆ ಕರೆಯಲು ಸೂಚಿಸಿದರು. ಆನಂತರ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.ಈ ಸಂದರ್ಭ ತಹಸೀಲ್ದಾರ್ ಸಂತೋಷ್‌ಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ.ಪ್ರಶಾಂತ್, ತಾಲೂಕು ಆರೋಗ್ಯಾಧಿಕಾರಿ ಅಬ್ದುಲ್ ಖಾದರ್, ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣ್, ಪಿಎಸ್‌ಐ ಹಾರೂನ ಅಕ್ತರ್ ರೈತ ಸಂಘದ ಈರಣ್ಣ, ತಿಪ್ಪೇಸ್ವಾಮಿ, ರಂಗನಗೌಡ, ಪರಮೇಶ್ವರಪ್ಪ ಮತ್ತಿತರರು ಇದ್ದರು.
- - --ಚಿತ್ರ-೧:
ಮಲೇಬೆನ್ನೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆಗಳ ಪರಿಹಾರಕ್ಕೆ ಒತ್ತಾಯಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.