೨೦ಕ್ಕೆ ಮಲೆನಾಡು ಸೊಸೈಟಿ ರಜತ ಮಹೋತ್ಸವ

| Published : Apr 16 2025, 12:40 AM IST

ಸಾರಾಂಶ

ಏ.೨೦ರಂದು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ

ಯಲ್ಲಾಪುರ: ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ರಜತ ಮಹೋತ್ಸವ ಏ.೨೦ರಂದು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪ್ರಾರಂಭವಾಗುವ ಮುನ್ನ ಅಗತ್ಯವಿರುವ ಆಧುನಿಕ ಕೃಷಿ ಉಪಕರಣಗಳ ಲಭ್ಯತೆ ಇರಲಿಲ್ಲ. ಆಗ ದೂರದ ಶಿರಸಿ ಅಥವಾ ಹುಬ್ಬಳ್ಳಿಗೆ ತೆರಳಬೇಕಿತ್ತಲ್ಲದೇ ರೈತರಿಗೆ ಉದ್ದರಿ ಸೌಲಭ್ಯವೂ ದೊರೆಯುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ರೈತರ ಸ್ಪಂದನೆ ದೊರೆತು ಸಂಘ ಆರಂಭಗೊಂಡಿತು. ತನ್ಮೂಲಕ ರೈತರು ಕಡಿಮೆ ಶ್ರಮದಲ್ಲಿ ಹೆಚ್ಚಿನ ಬೆಳೆ ಬೆಳೆದು ಉತ್ತಮ ಆದಾಯ ಗಳಿಸಲು ನೆರವಾಯಿತು ಎಂದರು.

ಏ.೨೦ರ ಬೆಳಗ್ಗೆ ೧೦ಗಂಟೆಗೆ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾನೂನು ಸಚಿವ ಎಚ್.ಕೆ. ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಮಧ್ಯಾಹ್ನ ೧೨.೩೦ರಿಂದ ವಿಭಾ ಹೆಗಡೆ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೨.೩೦ ಕ್ಕೆ ಸಹಕಾರಿ ಗೋಷ್ಠಿ ಆಯೋಜಿಸಲಾಗಿದ್ದು, ಭಾಸ್ಕರ ಹೆಗಡೆ ಕಾಗೇರಿ, ಎಸ್.ಜಿ. ಹೆಗಡೆ, ಬಸವರಾಜ ನಡುವಿನಮನಿ ವಿವಿಧ ವಿಷಯಗಳ ಕುರಿತು ತಮ್ಮ ವಿಚಾರ ಮಂಡಿಸಲಿದ್ದಾರೆ.

ಮಧ್ಯಾಹ್ನ ೩.೩೦ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆ ಶಾಸಕ ಶಿವರಾಮ ಹೆಬ್ಬಾರ ವಹಿಸಲಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸುವರು. ವಿಪ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸಹಕಾರಿ ಸಂಘಗಳ ಜಿಲ್ಲಾ ಉಪನಿಬಂಧಕ ಜಿ.ಕೆ.ಭಟ್ಟ ಅತಿಥಿಗಳಾಗಿ ಪಾಲ್ಗೊಳ್ಳುವರು.

ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸನ್ಮಾನಿಸುವರು. ಅತಿಥಿಗಳಾಗಿ ಮಾಜಿ ಶಾಸಕ ವಿ.ಎಸ್. ಪಾಟೀಲ, ಶಿರಸಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ ಆಗಮಿಸುವರು. ಸಂಜೆ ೭ಕ್ಕೆ ಪ್ರಸಿದ್ಧ ಕಲಾವಿದರಿಂದ ದಕ್ಷ ಯಜ್ಞ ಯಕ್ಷಗಾನ ಪ್ರದರ್ಶನವಿದ್ದು, ಹಿಮ್ಮೇಳದಲ್ಲಿ ರವೀಂದ್ರ ಭಟ್ಟ ಅಚವೆ ಮತ್ತು ಅನಂತ ಹೆಗಡೆ ದಂತಳಿಗೆ (ಭಾಗವತರು), ಶಂಕರ ಭಾಗ್ವತ ಯಲ್ಲಾಪುರ (ಮದ್ದಲೆ), ಪ್ರಮೋದ ಹೆಗಡೆ ಕಬ್ಬಿನಗದ್ದೆ (ಚಂಡೆ) ಮುಮ್ಮೇಳದಲ್ಲಿ ಕೆ.ಜೆ.ಮಂಜುನಾಥ ಪುರಪ್ಪೆಮನೆ, ಸುಬ್ರಹ್ಮಣ್ಯ ಹೆಗಡೆ ಮುರೂರು, ಸಂಜಯ ಬೆಳಿಯೂರು, ನಾಗೇಂದ್ರ ಭಟ್ಟ ಮುರೂರು, ವಿನಾಯಕ ಭಟ್ಟ ಶೇಡಿಮನೆ, ವಿಘ್ನೇಶ್ವರ ಹಾವಗೋಡಿ, ದೀಪಕ್ ಭಟ್ಟ ಕುಂಕಿ, ಗಣಪತಿ ಕುಣಬಿ ಹಾಗೂ ಶ್ರೀಧರ ಅಣಲಗಾರ ವಿವಿಧ ಪಾತ್ರ ನಿರ್ವಹಿಸುವರು ಎಂದು ವಿವರಿಸಿದರು.

ಸಂಘದ ಉಪಾಧ್ಯಕ್ಷ ಎಂ.ಜಿ. ಭಟ್ಟ ಶೀಗೆಪಾಲ, ನಿರ್ದೇಶಕ ಎಂ.ಆರ್. ಹೆಗಡೆ ತಾರೇಹಳ್ಳಿ, ಎಂ.ಪಿ. ಹೆಗಡೆ ಚವತ್ತಿ, ಗಣಪತಿ ಹೆಗಡೆ ಬೆದೆಹಕ್ಲು ಹಾಗೂ ಮುಖ್ಯ ಕಾರ್ಯ ನಿರ್ವಾಹಕ ವಿನಾಯಕ ಹೆಗಡೆ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.