ಮಳಿ ಬೇಳಿ ಚೋಲೊ ಐತಿ

| Published : Apr 01 2025, 12:45 AM IST

ಸಾರಾಂಶ

ಈ ವರ್ಷ ರೈತರ ವರ್ಷ. ರೈತರಿಗೆ ಮಳಿ ಬೆಳಿ ಬಹಳ ಚೊಲೊ ಐತಿ ಎಂದು ನಗರದ ಕಿಲ್ಲಾ ಒಣಿಯ ಹನುಮಂತ ದೇವರ ಹೊಂಡ ತುಳುಕುವ ಮುನ್ನ ಗುಡಿಯ ಪೂಜಾರಿ ನುಡಿದು ಹೊಂಡಕ್ಕೆ ಹಾರಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಈ ವರ್ಷ ರೈತರ ವರ್ಷ. ರೃತರಿಗೆ ಮಳಿ ಬೆಳಿ ಬಹಳ ಚೊಲೊ ಐತಿ ಎಂದು ನಗರದ ಕಿಲ್ಲಾ ಒಣಿಯ ಹನುಮಂತ ದೇವರ ಹೊಂಡ ತುಳುಕುವ ಮುನ್ನ ಗುಡಿಯ ಪೂಜಾರಿ ನುಡಿದು ಹೊಂಡಕ್ಕೆ ಹಾರಿದರು.

ಯುಗಾದಿ ಪಾಢ್ಯ ದಿನ ನಗರದ ಕಿಲ್ಲಾ ಒಣಿಯ ಹನುಮಂತ ದೇವರ ಹೊಂಡ ತುಳುಕುವ ಮುನ್ನ ದೇವರಿಗೆ ಪೂಜೆ ಸಲ್ಲಿಸಿ ಮುಂದಿನ ವರ್ಷದ ಹೇಳಿಕೆಯನ್ನು ಹೇಳಿ ನೀರಿನಿಂದ ತುಂಬಿದ ಹೊಂಡಕ್ಕೆ ಪೂಜಾರಿ ಹಾರಿ ಹೊಂಡ ತುಳಕಿಸಿದ. ಪಾಢ್ಯ ದಿನವಾದ ಕಿಲ್ಲಾ ಹನುಮಂತ ದೇವರ ಮೂರ್ತಿಗೆ ಮಹಾ ರುದ್ರಾಭಿಷೇಕ ಎಲಿ ಪೂಜೆ ಹಾಗೂ ಮಹಾ ಪ್ರಸಾದ ನಡೆಯಿತು. ನಂತರ ಮಹಾಮಂಗಳಾರತಿ ಮುಗಿದ ನಂತರ ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ಸಂಜೆ ೭ ಗಂಟೆಗೆ ಸಿದ್ದಪ್ಪ ಬಾರಕೇರ ಮನೆಯಿಂದ ಕಿಚಡಿ ನೈವೇದ್ಯ ಬಂದ ನಂತರ, ಹರಿಜನ ಒಣಿಯಿಂದ ಹನುಮಂತನ ನೂತನ ಪಾದ ರಕ್ಷೆಗಳು ಹಾಗೂ ಆರತಿ ಬಂದ ನಂತರ ಹೊಂಡದ ಪೂಜೆ ನಡೆದು ಹೊಂಡ ತುಳುಕುವ ಕಾರ್ಯ ನಡೆಯಿತು.

ಪೂಜಾರಿ ಹೊಂಡಕ್ಕೆ ಹಾರಿದ ನಂತರ ಒಣಿಯ ಎಲ್ಲ ಯುವಕರು ಹೊಂಡಕ್ಕೆ ಹಾರಿ ಸಂತಸಪಟ್ಟರು. ಹೊಂಡ ತುಳುಕು ಕಾರ್ಯದಲ್ಲಿ ಕಿಲ್ಲಾ ಒಣಿಯ ಹಿರಿಯರಾದ ಎಂ.ಎಸ್. ಪಾಟೀಲ, ಮಹೇಶ ಪಾಟೀಲ, ಮಹಾಂತಗೌಡ ಪಾಟೀಲ ಜೆಂ., ಮಹಾಂತೇಶ ಮಾಗಿ, ಶಂಕರ ತೋಟದ, ಮಹಾಂತೇಶ ಹೋಳಿ, ಗುಂಡಪ್ಪ ಮಾಗಿ, ಮಲಕಾಜಗೌಡ ಪಾಟೀಲ, ಮುತ್ತು ಕೌದಿ, ಅಮರೇಶ ಕೌದಿ, ಬುನಾದಿ ಮತ್ತು, ಶರಣಗೌಡ ಪಾಟೀಲ, ಈರಪ್ಪ ಮಡಿವಾಳರ, ಶಿದ್ದು ಘಂಟಿ, ಇತರರು ಉಪಸ್ಥಿತರಿದ್ದರು.