ಸಾರಾಂಶ
ಬನಹಟ್ಟಿ ಮಾಳಿಂಗರಾಯನ ದೇವಸ್ಥಾನದಲ್ಲಿ ಹಮ್ಮಿಕೊಂಡ ದೈಗೊಂಡಗೌಡರ ದರ್ಬಾರ ಹಬ್ಬ ಚರಿತ್ರೆ ಕುರಿತು ಡೊಳ್ಳಿನ ಪದಗಳಿಗೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ರಬಕವಿ- ಬನಹಟ್ಟಿ
ಹಾಲುಮತದವರ ಪಾಲಿನ ದೈವ ಹಾಗೂ ೧೪ನೇ ಶತಮಾನದಲ್ಲಿ ಬಾಳಿ ಬದುಕಿದ ಪವಾಡ ಪುರುಷ ಮಾಳಿಂಗರಾಯರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಮದ ಹಾಲಮತದ ಹಿರಿಯ, ಮಾಳಿಂಗರಾಯನ ಪೂಜಾರಿ ಮಾಯಣ್ಣ ಪೂಜಾರಿ ತಿಳಿಸಿದರು.ವಿಜಯದಶಮಿ ನಿಮಿತ್ತ ಬನಹಟ್ಟಿ ಮಾಳಿಂಗರಾಯನ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡ ದೈಗೊಂಡಗೌಡರ ದರ್ಬಾರ ಹಬ್ಬ (ಕರಿಸಿದ್ಧೇಶ್ವರ ಕರಿಕಟ್ಟಿದ ಹಬ್ಬ) ಚರಿತ್ರೆ ಕುರಿತು ಡೊಳ್ಳಿನ ಪದಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹುಲಜಂತಿ ಮಾಳಿಂಗರಾಯನ ಭಕ್ತಿಗೆ ಮೆಚ್ಚಿದ ಪರಶಿವ ದೇವಾಲಯಕ್ಕೆ ದೀಪಾವಳಿ ಅಮವಾಸ್ಯೆ ರಾತ್ರಿ ಆಗಮಿಸಿ ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ. ಇದನ್ನು ನೋಡಲು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತ ಸಮೂಹ ಪಾಲ್ಗೊಂಡಿರುತ್ತದೆ ಎಂದರು.
ಬನಪ್ಪ ಪೂಜಾರಿ ಮಾತನಾಡಿ, ನವೆಂಬರ್ ತಿಂಗಳಲ್ಲಿ ಜತ್ತ ತಾಲೂಕಿನ ಹುಲಜಂತಿಯಲ್ಲಿ ಜರುಗುವ ಮಾಳಿಂಗರಾಯನ ಜಾತ್ರೆಯಲ್ಲಿ ಮುಂಡಾಸ್ ನೋಡಲು ಸುಮಾರು ೫ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಈ ಮುಂಡಾಸ್ ಯಾವ ದಿಕ್ಕಿನೆಡೆಗೆ ವಾಲಿರುತ್ತದೆ ಎಂಬುದರ ಮೇಲೆ ಮುಂಬರುವ ರಾಜಕೀಯ, ಸಾಮಾಜಿಕ ಹಾಗೂ ಮಳೆ-ಬೆಳೆ ವಿಶ್ಲೇಷಿಸುವುದು ಇಲ್ಲಿನ ವಾಡಿಕೆ ಎಂದು ಹೇಳಿದರು.ಇದಕ್ಕೂ ಪೂರ್ವದಲ್ಲಿ ಮಾಳಿಂಗರಾಯರ ಮೂರ್ತಿಗೆ ವಿಶೇಷ ಅಭಿಷೇಕ, ಬುತ್ತಿಪೂಜೆ ಸೇರಿದಂತೆ ಅನೇಕ ವಿಧಿ ವಿಧಾನ ಜರುಗಿದವು. ಮೂರ್ತಿ ಹೊತ್ತ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು. ಅನ್ನದಾಸೋಹದೊಡನೆ ಜಾತ್ರೆ ಸಂಪನ್ನಗೊಳಿಲಾಯಿತು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಹಿರಿಯರಾದ ಬೀರಪ್ಪ ಜಿಡ್ಡಿಮನಿ, ಸಿದ್ದಮಲ್ಲಪ್ಪ ಜಿಡ್ಡಿಮನಿ, ಬೀರಪ್ಪ ಭುಜಂಗ, ಹಣಮಂತ ಕುಡಚಿ, ರಾಮು ಜಿಡ್ಡಿಮನಿ, ಮಾರುತಿ ಮಹೇಷವಾಡಗಿ, ಮಲ್ಲಪ್ಪ ಹುನ್ನೂರ, ಮಾಳಪ್ಪ ಕರಿಗಾರ, ಕಾಡಪ್ಪ ತುಂಗಳ, ಪರಸಪ್ಪ ಜಿಡ್ಡಿಮನಿ, ಸಿಂಗಾಡಿ ಗೊಂಗ್ಡಿ, ಯಲ್ಲಪ್ಪ ಮಹೇಷವಾಡಗಿ, ಕರೆಪ್ಪ ಭುಜಂಗ, ಪರಶುರಾಮ ಜಂಗನವರ, ಯಲ್ಲಪ್ಪ ಸಂಗೊಳ್ಳಿ, ರಮೇಶ ಜಿಡ್ಡಿಮನಿ ಸೇರಿದಂತೆ ಅನೇಕ ಹಿರಿಯರು, ಡೊಳ್ಳಿನ ಪದಗಳ ಹಾಡುಗಾರರು ಸೇರಿದಂತೆ ಅನೇಕರಿದ್ದರು.