ಪಕ್ಷಾತೀತ ಸಂಘಟನಯಿಂದ ಹಕ್ಕು ಪಡೆಯಬಹುದು

| Published : Feb 14 2025, 12:33 AM IST

ಸಾರಾಂಶ

ಕರ್ನಾಟಕ ರಾಜ್ಯದ ರೈತರ ಸಾಲದ ಬೇಡಿಕೆ ಸುಮಾರು 12 ಸಾವಿರ ಕೋಟಿಯಷ್ಟಿದೆ. ಆದರೆ ನಬಾರ್ಡ್ ಬ್ಯಾಂಕ್ ಕಳೆದ ವರ್ಷ 5,300 ಕೋಟಿ ಸಾಲ ನೀಡಿತ್ತು,

ಕನ್ನಡಪ್ರಭ ವಾರ್ತೆ ನಂಜನಗೂಡುರೈತ ಚಳವಳಿಯ ಹೋರಾಟದಿಂದಾಗಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ದೊರಕುವಂತಾಗಿದೆ, ರೈತರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಸಂಘಟಿತರಾದಲ್ಲಿ ಸರ್ಕಾರದ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿ ತಮ್ಮ ಹಕ್ಕು ಪಡೆಯಬಹುದಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್ ಹೇಳಿದರು. ತಾಲೂಕಿನ ಕೌಲಂದೆ ಹೋಬಳಿಯ ಮಲ್ಲಹಳ್ಳಿ ಗ್ರಾಮದಲ್ಲಿ ಪ್ರೊ. ನಂಜುಂಡಸ್ವಾಮಿ ಅವರ 89ನೇ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರೈತ ಸಂಘದಿಂದ ಏರ್ಪಡಿಸಿದ್ದ ರೈತ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯದ ರೈತರ ಸಾಲದ ಬೇಡಿಕೆ ಸುಮಾರು 12 ಸಾವಿರ ಕೋಟಿಯಷ್ಟಿದೆ. ಆದರೆ ನಬಾರ್ಡ್ ಬ್ಯಾಂಕ್ ಕಳೆದ ವರ್ಷ 5,300 ಕೋಟಿ ಸಾಲ ನೀಡಿತ್ತು, ಈ ವರ್ಷ 2,300 ಕೋಟಿ ಸಾಲ ನೀಡುವ ಮೂಲಕ ಕಳೆದ ಬಾರಿಗಿಂತ ಸಾಲವನ್ನು ಕಡಿತಗೊಳಿಸಿದ ಪರಿಣಾಮ ಸಹಕಾರ ಸಂಘಗಳಿಂದ ರೈತರಿಗೆ ಸಾಲ ದೊರಕದೆ ಮೈಕ್ರೋ ಫೈನಾನ್ಸ್ ಗಳ ಅಟ್ಟಹಾಸಕ್ಕೆ ಗ್ರಾಮೀಣ ಬಡ ರೈತರ ಜೀವಿಗಳು ಬಲಿಯಾಗುತ್ತಿವೆ. ರೈತ ಸಂಘದ ಹೋರಾಟದ ಫಲವಾಗಿ ಮೈಕ್ರೋ ಫೈನಾನ್ಸ್ ನಿಂದ ಜೀವ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ದೊರಕುವಂತಾಗಿದೆ, ಮೈಕ್ರೋ ಫೈನಾನ್ಸ್ ಅಟ್ಟಹಾಸದಿಂದ ನೊಂದ ಜೀವಗಳು ಆತ್ಮಹತ್ಯೆಯ ದಾರಿ ಹಿಡಿಯಬಾರದು, ಆತ್ಮಸ್ಥೈರ್ಯವಿರಲಿ, ಹಳ್ಳಿಹಳ್ಳಿಗಳಲ್ಲಿ ಹಸಿರು ಶಾಲಿನ ಸೈನಿಕರು ನಿಮ್ಮ ಜೊತೆಗಿದ್ದೇವೆ ನಿಮ್ಮ ಪರವಾಗಿ ಹೋರಾಟ ನಡೆಸಲಿದ್ದೇವೆ ಎಂದರು.ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ಪ್ರೊ. ನಂಜುಂಡಸ್ವಾಮಿ ಅವರು ರೈತರ ಆತ್ಮಹತ್ಯೆ ನಿಲ್ಲಬೇಕು, ರೈತರ ಬದುಕು ಹಸನು ಮಾಡಬೇಕೆಂಬ ಉದ್ದೇಶದಿಂದ ವಿದೇಶಿ ಬಿತ್ತನೆ ಬೀಜ ಮಾರಾಟ, ರಾಸಾಯನಿಕ ಗೊಬ್ಬರ ಮಾರಾಟ ಕಂಪನಿಗಳ ವಿರುದ್ದ ಜಾಗತಿಕ ಹೋರಾಟ ನಡೆಸಿದವರು, ಅಲ್ಲದೆ ಮೊದಲ ಬಾರಿಗೆ ರೈತರ ಸಾಲ ಮನ್ನಾ ಮಾಡುವಂತೆ ಧ್ವನಿಯೆತ್ತಿದ ಮೊದಲ ಭಾರತೀಯ ರೈತಪರ ಹೋರಾಟಗಾರ ಪ್ರೊ. ನಂಜುಂಡಸ್ವಾಮಿ ಅವರ ಹೋರಾಟ, ವಿಚಾರಧಾರೆಗಳಿಂದ ಪ್ರೇರಿಪಿತರಾದ ಹಲವಾರು ರೈತ ಹೋರಾಟಗಾರರು ಇಂದು ರೈತರ ಪರವಾಗಿ ಹೋರಾಟ ನಡೆಸಿ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ಪ್ರೊ. ನಾಗೇಗೌಡ ಕಾಳಾವಾರ ಮಾತನಾಡಿ, ಪ್ರೊ. ನಂಜುಂಡಸ್ವಾಮಿ ಅವರು ರೈತ ವರ್ಗದ ಪ್ರೇರಕ ಶಕ್ತಿಯಾಗಿದ್ದರು, ಅವರ ಮಾತುಗಳು ಎಂದರೆ ಅಧಿಕಾರಿಶಾಹಿ ವರ್ಗ, ಮಂತ್ರಿಗಳು ಗಡಗಡ ನಡುಗುತ್ತಿದ್ದರು, ಪ್ರೊ. ನಂಜುಂಡಸ್ವಾಮಿಯವರಂತೆ ರೈತರು ಯಾರಿಗೂ ಹೆದರದೆ ಹೋರಾಟ ನಡೆಸಬೇಕು, ಈ ನಿಟ್ಟಿನಲ್ಲಿ ರೈತ ಸಂಘಟನೆಗಳು ಸಾಮೂಹಿಕ ಮುಕ್ತ ಸಂವಾದಗಳನ್ನು ಏರ್ಪಡಿಸಿ ರೈತರಿಗೆ ಧೈರ್ಯ ತುಂಬಬೇಕಿದೆ, ಜೊತೆಗೆ ರೈತರ ಬದುಕು ಹಸನು ಮಾಡಲು ಕೃಷಿಯ ಬಗ್ಗೆ ಸಂವಾದಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್ ರಾವ್, ಹಸಿರು ಸೇನೆ ಅಧ್ಯಕ್ಷ ಬಂಗಾರಸ್ವಾಮಿ, ಮಹಾದೇವಸ್ವಾಮಿ, ರವಿ, ಮಾದನಾಯಕ, ನಾಗಯ್ಯ, ಮಹದೇವಪ್ಪ, ವರದರಾಜು, ಕೆಂಪಣ್ಣ, ಶಿವಣ್ಣ, ರಂಗಸ್ವಾಮಿ, ಮಾದಪ್ಪ, ಪರಮೇಶ್ವರಪ್ಪ, ಮಹದೇವನಾಯಕ, ಶಂಕರ ನಾಯಕ, ರೈತ ಮುಖಂಡರು ಇದ್ದರು.