ಸಾರಾಂಶ
ಮಲ್ಲಿಕಾರ್ಜುನ ಶ್ರೀ ಚರಪಟ್ಟಾಧಿಕಾರ ಮಹೋತ್ಸವಅಟವಿ ಜಂಗಮ ಕ್ಷೇತ್ರದ ಉತ್ತರಾಧಿಕಾರಿಯಾಗಿ ನೇಮಕ ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗಿ ತುಮಕೂರು ತಾಲೂಕಿನ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರ
ಕನ್ನಡಪ್ರಭ ವಾರ್ತೆ ತುಮಕೂರುತಾಲೂಕಿನ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದ ಉತ್ತರಾಧಿಕಾರಿಯಾಗಿ ಮಲ್ಲಿಕಾರ್ಜುನ ಸ್ವಾಮೀಜಿಯ ಚರಪಟ್ಟಾಧಿಕಾರ ಮಹೋತ್ಸವ ಸೋಮವಾರ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಸಮಾರಂಭದಲ್ಲಿ ನಿರಾಭಾರಿ ನಿರಂಜನ ಜಂಗಮ ದೀಕ್ಷೆ ಚಿನ್ಮಯ ಅನುಗ್ರಹವನ್ನು ಶ್ರೀಮಠದ ಅಧ್ಯಕ್ಷ ಅಟವಿ ಶಿವಲಿಂಗ ಸ್ವಾಮೀಜಿ ಮಲ್ಲಿಕಾರ್ಜುನ ಸ್ವಾಮೀಜಿಗೆ ನೀಡಿದರು.ಅಟವಿ ಮಠದ ವಿದ್ಯಾರ್ಥಿಯಾಗಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಸಾಸನೂರು ಗ್ರಾಮದವರು. ತಮ್ಮ 21ನೇ ವಯಸ್ಸಿನಲ್ಲಿ ಅಟವೀ ಮಠದ ಚರಪಟ್ಟಾಧಿಕಾರ ಸ್ವೀಕಾರ ಮಾಡಿದರು. ತಂದೆ ಬಸಯ್ಯ ಹಿರೇಮಠ, ತಾಯಿ ಸಂಗಮ್ಮ ಅವರು ಈ ಸಮಾರಂಭದಲ್ಲಿ ತಮ್ಮ ಪುತ್ರನನ್ನು ಶ್ರೀಮಠಕ್ಕೆ ತಮ್ಮ ಧಾರೆ ಎರೆದರು. ಭವಬಂಧನ ತ್ಯಜಿಸಿದ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ಸ್ವೀಕಾರ ಮಾಡಿದ ಅಟವಿ ಶಿವಲಿಂಗ ಸ್ವಾಮೀಜಿ ಶ್ರೀಗಳಿಗೆ ದೀಕ್ಷೆ ನೀಡಿ ಸಮಾಜಕ್ಕೆ ಅರ್ಪಣೆ ಮಾಡಿದರು.
ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಬೆಟ್ಟದಹಳ್ಳಿ ಗವಿ ಮಠದ ಚಂದ್ರಶೇಖರ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಮಲ್ಲಿಕಾರ್ಜುನ ದೇವರು ಸ್ವಾಮೀಜಿಗಳ ದೀಕ್ಷೆ ಅನುಗ್ರಹ ಸಮಾರಂಭಕ್ಕೆ ಸಾಕ್ಷಿಯಾದರು.ನಂತರ ಮಠದಲ್ಲಿ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮ, ನೂತನ ಶ್ರೀಗಳ ಪಲ್ಲಕ್ಕಿ ಉತ್ಸವ ನೆರವೇರಿದವು. ನಂತರ ಚಿಕ್ಕತೊಟ್ಕುಕೆರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಲ್ಲಿಕಾರ್ಜುನ ದೇವರು ಸ್ವಾಮೀಜಿಗಳ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ಸಂಜೆ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಅಟವಿ ಮಹಾಸ್ವಾಮಿಗಳ 124ನೇ ಪುಣ್ಯಸ್ಮರಣೆ, ಅಟವಿ ಶಿವಲಿಂಗ ಸ್ವಾಮೀಜಿಗಳ ಪೀಠಾರೋಹಣದ ರಜತ ಮಹೋತ್ಸವ ಸಮಾರಂಭ ನೆರವೇರಿತು. ಇದರ ಅಂಗವಾಗಿ ರೊಟ್ಟಿ ಜಾತ್ರೆ, ಕಾರ್ತಿಕ ಲಕ್ಷ ದೀಪೋತ್ಸವ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿದ್ಧಗಂಗಾ ಆಸ್ಪತ್ರೆವತಿಯಿಂದ ಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ತುಮಕೂರು ನಗರ ವೀರಶೈವ ಸಮಾಜ ಅಧ್ಯಕ್ಷ, ಮಠದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೇಖರ್, ಮಠದ ಆಡಳಿತ ಮಂಡಳಿ ಟ್ರಸ್ಟಿಗಳಾದ ಸಿ.ಮಹದೇವಪ್ಪ, ಬೆಟ್ಟಯ್ಯ, ಜಗದೀಶ್ಚಂದ್ರ, ರವಿಶಂಕರ್, ಮಂಜುನಾಥ್ ಬದ್ನಾಳ್, ಮುಖಂಡರಾದ ಕೋರಿ ಮಂಜುನಾಥ್, ಚಂದ್ರಶೇಖರ್, ಶಿವಕುಮಾರ್, ಶಿವಲಿಂಗಮ್ಮ, ಹೆಬ್ಬಾಕ ಮಲ್ಲಿಕಾರ್ಜುನ್, ನಂಜಯ್ಯ, ರಾಜೇಂದ್ರಕುಮಾರ್, ವಿಶ್ವನಾಥ್ ಅಪ್ಪಾಜಪ್ಪ, ಚಂದ್ರಶೇಖರ್, ಟಿ.ಆರ್.ಅನುಸೂಯಮ್ಮ, ಬಾಲಚಂದ್ರ, ಹಿರೇತೊಟ್ಲುಕೆರೆ ಶ್ರೀಧರ್ ಭಾಗವಹಿಸಿದ್ದರು.