ಪೌಷ್ಟಿಕಾಂಶ ಆಹಾರ ಸೇವನೆಯಿಂದ ಅಪೌಷ್ಟಿಕತೆ ನಿವಾರಣೆ: ನ್ಯಾ.ಸುಧೀರ್

| Published : Sep 22 2025, 01:00 AM IST

ಸಾರಾಂಶ

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಕುಡಿಯಲು ಶುದ್ಧ ನೀರನ್ನು ಬಳಸುವ ಜೊತೆಗೆ, ಬಯಲು ಮಲವಿಸರ್ಜನೆ ತಪ್ಪಿಸಿ ಕಡ್ಡಾಯವಾಗಿ ಶೌಚಾಲಯಗಳನ್ನೇ ಬಳಸಬೇಕು. ನಾವು ವಾಸ ಮಾಡುವ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಯಾವುದೇ ರೋಗ ರುಜಿನಗಳು ಬರದಂತೆ ಎಚ್ಚರ ವಹಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿದರೆ ಅಕಾಲಿಕವಾಗಿ ಅಪೌಷ್ಟಿಕತೆಯಿಂದ ಸಂಭವಿಸುವ ತಾಯಿ ಮತ್ತು ಮಗುವಿನ ಮರಣವನ್ನು ತಪ್ಪಿಸಬಹುದು ಎಂದು ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಧೀಶ ಸುಧೀರ್ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಪೌಷ್ಟಿಕಾಂಶಗಳ ಆಹಾರ ಪದಾರ್ಥಗಳ ಅರಿವು ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಪೌಷ್ಟಿಕಾಂಶಗಳ ಕೊರತೆಯಿಂದ ಮಕ್ಕಳು ಹಾಗೂ ಬಾಣಂತಿಯರ ಅಕಾಲಿಕ ಸಾವು ಸಂಭವಿಸುತ್ತಿರುವ ಪ್ರಕರಣಗಳನ್ನು ನಾವು ಪತ್ರಿಕೆಗಳು ಹಾಗೂ ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ. ನಿಯಮಿತವಾಗಿ ಸೊಪ್ಪು ತರಕಾರಿಗಳು ಹಣ್ಣು ಹಾಲು ಮೊಟ್ಟೆ ಸೇರಿದಂತೆ ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಅಪೌಷ್ಟಿಕತೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಕುಡಿಯಲು ಶುದ್ಧ ನೀರನ್ನು ಬಳಸುವ ಜೊತೆಗೆ, ಬಯಲು ಮಲವಿಸರ್ಜನೆ ತಪ್ಪಿಸಿ ಕಡ್ಡಾಯವಾಗಿ ಶೌಚಾಲಯಗಳನ್ನೇ ಬಳಸಬೇಕು. ನಾವು ವಾಸ ಮಾಡುವ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಯಾವುದೇ ರೋಗ ರುಜಿನಗಳು ಬರದಂತೆ ಎಚ್ಚರ ವಹಿಸಬೇಕು ಕಿವಿಮಾತು ಹೇಳಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ ಮಾತನಾಡಿ, ರೈತರು ದನಕರುಗಳನ್ನು ಸಾಕಿ ಉತ್ಪಾದನೆಯಾಗುವ ಹಾಲನ್ನು ತಾವು ಮನೆ ಬಳಕೆಗೆ ಬಳಸಿಕೊಳ್ಳದೆ ಸಂಪೂರ್ಣವಾಗಿ ಡೈರಿಗೆ ಹಾಕುತ್ತಿದ್ದಾರೆ. ಮನೆಗೆ ಅವಶ್ಯಕತೆ ಇರುವಷ್ಟು ಹಾಲನ್ನು ಉಳಿಸಿಕೊಂಡು ಹೆಚ್ಚುವರಿ ಆದ ಹಾಲನ್ನು ಮಾತ್ರ ಡೈರಿಗೆ ಹಾಕಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜೆಎಂಎಫ್ ಸಿ ಅಪರ ಸಿವಿಲ್ ನ್ಯಾಯಾಧೀಶರಾದ ಅರ್ಪಿತಾ, ದೇವರಾಜು, ಅಪರ ಸರ್ಕಾರಿ ಅಭಿಯೋಜಕರಾದ ವೀರಭದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪದ್ಮಾ, ಶಾಂತವ್ವ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆರೋಗ್ಯ ಅಧಿಕಾರಿ ಶೀಳನೆರೆ ಸತೀಶ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಾಧುಗೋನಹಳ್ಳಿ ಮಂಜುನಾಥ್, ಖಜಾಂಚಿ ಪ್ರಸನ್ನಕುಮಾರ್ ಮತ್ತಿತರರು ಇದ್ದರು.