ಸಾರಾಂಶ
ಪರಿಶಿಷ್ಟ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ, ಹಲ್ಲೆ, ದೌರ್ಜನ್ಯ ನಡೆಸಿರುವ ಮತ್ತು ಆ ದೌರ್ಜನ್ಯವನ್ನು ಬೆಂಬಲಿಸಿರುವ, ಸಮರ್ಥಿಸಿರುವ ಎಲ್ಲರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿ, ಕಾನೂನಿನ ಮಾನ ಕಾಪಾಡಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಮಲ್ಪೆ ಬಂದರಿನಲ್ಲಿ ಮೀನು ಕದ್ದ ಕ್ಷುಲ್ಲುಕ ಕಾರಣಕ್ಕೆ ಪರಿಶಿಷ್ಟ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ, ಹಲ್ಲೆ, ದೌರ್ಜನ್ಯ ನಡೆಸಿರುವ ಮತ್ತು ಆ ದೌರ್ಜನ್ಯವನ್ನು ಬೆಂಬಲಿಸಿರುವ, ಸಮರ್ಥಿಸಿರುವ ಎಲ್ಲರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿ, ಕಾನೂನಿನ ಮಾನ ಕಾಪಾಡಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆಗ್ರಹಿಸಿದೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಈ ಘಟನೆಯಲ್ಲಿ ರಾಜಿ ಮಾಡಿಕೊಳ್ಳಲು ಪ್ರಜ್ಞಾವಂತ ಸಮಾಜ ಅವಕಾಶ ನೀಡಬಾರದು. ಸಂತ್ರಸ್ತೆಗೆ ತುರ್ತು ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಅವರ ಕುಟುಂಬಕ್ಕೆ ಭದ್ರತೆ, ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರನ್ನು ಆಗ್ರಹಿಸಿದರು.
ಪೋಲೀಸರ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಕೆಲವರು ಬಳಸಿದ ಭಾಷೆ, ಹಲ್ಲೆಯ ಹೇಯ ಘಟನೆ ಸಮರ್ಥಿಸಿದ ರೀತಿ, ಪರಿಶಿಷ್ಟರ ಮೇಸೆ ದೌರ್ಜನ್ಯ ತಡೆ ಕಾಯ್ದೆಯಡಿ ಹಾಕಿದ ಕೇಸು ವಾಪಸು ಪಡೆಯುವಂತೆ ಮಾಡಿದ ಆಗ್ರಹ, ಎಚ್ಚರಿಕೆಯ ಸ್ವರೂಪದಿಂದ ಕೂಡಿದ್ದು, ಇದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಜನರಲ್ಲಿ ಅವ್ಯಕ್ತ ಆತಂಕವುಂಟಾಗಿದೆ ಎಂದವರು ಅಭಿಪ್ರಾಯಪಟ್ಟರುಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಕಾಂತಪ್ಪ, ಸದಾಶಿವ ಸಾಲಿಯಾನ್, ಸರೋಜಿನಿ ಬಂಟ್ವಾಳ, ರಘು ಎಕ್ಕಾರ್, ಕೃಷ್ಣ ಮೂಡುಬೆಳ್ಳೆ, ಮಾಧವ ಕಾವೂರು, ಪದ್ಮನಾಭ ಇದ್ದರು.